×
Ad

ಮುಂಬೈ: ನಟ ಸಲ್ಮಾನ್ ಖಾನ್ ನಿವಾಸದೆದುರು ಗುಂಡಿನ ದಾಳಿ; ಬಿಗಿ ಬಂದೋಬಸ್ತ್

Update: 2024-04-14 10:45 IST

ಸಲ್ಮಾನ್ ಖಾನ್ (PTI)

ಮುಂಬೈ: ರವಿವಾರ ಬೆಳಗ್ಗೆ ಮೋಟರ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದೆದುರು ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಿದ್ದಾರೆ. ಇದರ ಬೆನ್ನಿಗೇ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಟ ಸಲ್ಮಾನ್ ಖಾನ್ ವಾಸಿಸುತ್ತಿರುವ ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್ ಮೆಂಟ್ಸ್ ಬಳಿ ಇಂದು ಮುಂಜಾನೆ 5 ಗಂಟೆಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿರುವ ಇಬ್ಬರು ಅಪರಿಚಿತ ವ್ಯಕ್ತಿಗಳು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಘಟನೆಯ ನಂತರ, ಸಲ್ಮಾನ್ ಖಾನ್ ನಿವಾಸದೆದುರಿನ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಗುಂಡಿನ ದಾಳಿ ನಡೆಸಿದ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ಅವರ ನಿವಾಸದ ಬಳಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ವಿಡಿಯೊ ತುಣುಕುಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಿಧಿ ವಿಜ್ಞಾನ ತಜ್ಞರ ತಂಡವೊಂದು ಧಾವಿಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದು, ಘಟನೆಯ ಕುರಿತು ತನಿಖೆ ಪ್ರಾರಂಭಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ತಮ್ಮ ನಿವಾಸದಲ್ಲಿದ್ದರೆ ಎಂಬ ಕುರಿತು ಪೊಲೀಸರಿಂದಾಗಲಿ ಅಥವಾ ಅವರ ಕುಟುಂಬದ ಸದಸ್ಯರಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಒಡ್ಡಿರುವ ಇಮೇಲ್ ಒಂದನ್ನು ಅವರ ಕಚೇರಿಯು ಸ್ವೀಕರಿಸಿತ್ತು. ಇದಾದ ನಂತರ, ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ, ಗೋಲ್ಡಿ ಬ್ರಾರ್ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 120-ಬಿ (ಕ್ರಿಮಿನಲ್ ಪಿತೂರಿ), 506-II (ಕ್ರಿಮಿನಲ್ ಬೆದರಿಕೆ) ಹಾಗೂ 34 (ಏಕೋದ್ದೇಶ) ಅಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News