ಆಪರೇಷನ್ ಸಿಂಧೂರ ಬಳಿಕ ಮೊದಲ ಬಾರಿಗೆ ಈ ವಾರ ಸಚಿವ ಮಂಡಳಿ ಸಭೆ
PC: x.com/MarioNawfal
ಹೊಸದಿಲ್ಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಈ ವಾರ ಸಚಿವ ಸಂಪುಟ ಸಭೆ ಕರೆದಿದ್ದಾರೆ. ತಮ್ಮ ಮೂರನೇ ಅವಧಿಯ ಅಧಿಕಾರದ ಒಂದು ವರ್ಷ ಮುಕ್ತಾಯಕ್ಕೆ ಮುನ್ನ ಈ ಸಭೆ ನಡೆಯುತ್ತಿದೆ.
ಸಭೆಯ ಕಾರ್ಯಸೂಚಿಯನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಬುಧವಾರ ಸಭೆ ನಡೆಯಲಿದೆ ಎಂದು ಸಚಿವರಿಂದ ತಿಳಿದುಬಂದಿದೆ. ಪ್ರತಿ ಸಚಿವ ಮಂಡಳಿ ಸಭೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡುವ ಜತೆಗೆ ಸಚಿವರಿಗೆ ಪ್ರಗತಿಯ ವಿವರ ನೀಡುತ್ತವೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆದ ನಿಖರ ದಾಳಿ ಮತ್ತು ಮೋದಿ ಆಡಳಿತದ 11 ವರ್ಷಗಳ ಸಾಧನೆ ಬಗ್ಗೆ ಜನರನ್ನು ತಲುಪುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೂ ಮುನ್ನ ಪ್ರಧಾನಿಯವರು ಸಂಪುಟ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿ, ರಾಜಕೀಯ ವಿಶ್ಲೇಷಣೆಗಳನ್ನು ಮಾಡದಂತೆ ಸೂಚನೆ ನೀಡಿದ್ದರು.
ಸಾರ್ವಜನಿಕ ವಿಷಯಗಳ ವಿಚಾರದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಸಮರ್ಪಕ ಸಿದ್ಧತೆ ನಡೆಸಿ, ಯಾವುದೇ ಸಾರ್ವಜನಿಕ ಭಾಷಣಗಳಿಗೆ ಮುನ್ನ ಎಲ್ಲ ವಿವರಗಳನ್ನು ಪರಾಮರ್ಶಿಸಿ ಜಾಗರೂಕವಾಗಿ ಸಿದ್ಧತೆ ನಡೆಸುವಂತೆ ಸೂಚಿಸಿದ್ದರು.
ಆಪರೇಷನ್ ಸಿಂಧೂರ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾದ ಲೇಖನಗಳನ್ನು ಇತ್ತೀಚೆಗೆ ಕೆಲ ಸಚಿವರಿಗೆ ನೀಡಿ, ಭಯೋತ್ಪಾದಕರು ಮತ್ತು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತದ ಎಲ್ಲ ಸಂಭಾವ್ಯತೆಗಳ ಮಹತ್ವವನ್ನು ಅರಿತುಕೊಳ್ಳುವಂತೆ ಸೂಚಿಸಲಾಗಿತ್ತು. ಕಳೆದ ಸಚಿವ ಸಂಪುಟ ಸಭೆಯಲ್ಲಿ ಲೇಖನ ಹಾಗೂ ಹಿಂದಿ ಭಾಷಾಂತರವನ್ನು ನೀಡಲಾಗಿತ್ತು.