×
Ad

ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ : ಪ್ರವಾಹ, ಸರಣಿ ಭೂಕುಸಿತಗಳಲ್ಲಿ ಕನಿಷ್ಠ 17 ಮಂದಿ ಮೃತ್ಯು,13 ಜನರು ನಾಪತ್ತೆ

Update: 2025-09-17 20:05 IST

PC :  PTI 

ಡೆಹ್ರಾಡೂನ್,ಸೆ,17: ಡೂನ್ ಕಣಿವೆ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸಿದ ಪ್ರಕೃತಿ ವಿಕೋಪಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಮೇಘಸ್ಫೋಟದಿಂದಾಗಿ ಪ್ರವಾಹಗಳು ಮತ್ತು ಸರಣಿ ಭೂಕುಸಿತಗಳಲ್ಲಿ ಕನಿಷ್ಠ 17 ಜನರು ಮೃತಪಟ್ಟಿದ್ದು, ಇತರ 13 ಜನರು ನಾಪತ್ತೆಯಾಗಿದ್ದಾರೆ.

ಉತ್ತರಾಖಂಡದಾದ್ಯಂತ, ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಆರಂಭಗೊಂಡಿದ್ದ ರಣಭೀಕರ ಮಳೆಯು ವ್ಯಾಪಕ ವಿನಾಶವನ್ನುಂಟುಮಾಡಿದೆ. ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ಕೊಚ್ಚಿಕೊಂಡು ಹೋಗಿದ್ದು, ನದಿಗಳು ಭೋರ್ಗರೆಯುವ ಪ್ರವಾಹಗಳಾಗಿ ಮಾರ್ಪಟ್ಟಿವೆ. ಪ್ರಮುಖ ರಸ್ತೆಗಳು ಹಾನಿಗೀಡಾಗಿವೆ.

ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ(ಎಸ್‌ಡಿಆರ್‌ಎಫ್)ಯ ಪ್ರಕಾರ ಪರಿಸ್ಥಿತಿ ಗಂಭೀರವಾಗಿಯೇ ಉಳಿದುಕೊಂಡಿದೆ. 17 ಜನರು ನದಿಗಳಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಅಥವಾ ಅವಶೇಷಗಳಲ್ಲಿ ಸಜೀವ ಸಮಾಧಿಯಾಗಿದ್ದಾರೆ.

ಡೆಹ್ರಾಡೂನ್ ಹೊರವಲಯದ ಸಹಸ್ರಧಾರಾ ಮತ್ತು ಮಾಲದೇವತಾ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ರಿಸ್ಪಾನಾ ಮತ್ತು ಬಿಂದಾಲ್‌ನಂತಹ ನದಿಗಳು ಅಪಾಯದ ಮಟ್ಟಗಳನ್ನು ಮೀರಿ ಹರಿಯುತ್ತಿದ್ದು, ಹಲವಾರು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಮನೆಗಳು ಕೆಸರಿನಿಂದ ಆವೃತಗೊಂಡಿವೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಹಲವಾರು ಅಂಗಡಿಗಳು ಮತ್ತು ಹೋಟೆಲ್‌ಗಳೂ ಕೊಚ್ಚಿಕೊಂಡು ಹೋಗಿವೆ. ಸಹಸ್ರಧಾರಾದಲ್ಲಿ ಕನಿಷ್ಠ 70 ಗ್ರಾಮಸ್ಥರನ್ನು ಎಸ್‌ಡಿಆರ್‌ಎಫ್ ರಕ್ಷಿಸಿದೆ. ಈ ಭಾಗದ ಪ್ರಮುಖ ಮಾರುಕಟ್ಟೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಪ್ರವಾಸಿಗರಿಗಾಗಿ ನಿರ್ಮಿಸಲಾಗಿದ್ದ ಹಲವು ಅಂಗಡಿ ಮಳಿಗೆಗಳು ಮತ್ತು ಅಡುಗೆಮನೆಗಳು ನಾಶವಾಗಿವೆ.

ಸಹಸ್ರಧಾರಾ-ಕಾರ್ಲಿಗಡ್ ರಸ್ತೆಯಲ್ಲಿ ಒಂಬತ್ತಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತದಿಂದಾಗಿ ರಸ್ತೆಗೆ ಹಾನಿಯಾಗಿದ್ದು, ಸಾಂಗ್ ನದಿಯ ಪ್ರವಾಹವು ಮಾಲದೇವತಾ ಪ್ರದೇಶದಲ್ಲಿ ರಸ್ತೆಯನ್ನು ಕೊಚ್ಚಿಕೊಂಡು ಹೋಗಿದೆ. ಈ ಪ್ರದೇಶ ರಾಜ್ಯದ ಇತರೆಡೆಗಳ ಜತೆ ಸಂಪರ್ಕ ಕಡಿದುಕೊಂಡಿದೆ.

ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಾರಣೆಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸರಕಾರದಿಂದ ಸಂಪೂರ್ಣ ನೆರವಿನ ಭರವಸೆಯನ್ನು ನೀಡಿದ್ದಾರೆ.

ಡೆಹ್ರಾಡೂನ್‌ನ ದೇವಭೂಮಿ ಇನ್‌ಸ್ಟಿಟ್ಯೂನ್ ಕ್ಯಾಂಪಸ್‌ಗೆ ನೆರೆ ನೀರು ನುಗ್ಗಿದ್ದು,ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 200 ವಿದ್ಯಾರ್ಥಿಗಳನ್ನು ಎಸ್‌ಡಿಆರ್‌ಎಫ್ ತಂಡಗಳು ರಕ್ಷಿಸಿವೆ. ಎನ್‌ಡಿಆರ್‌ಎಫ್ ತಂಡಗಳೂ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

ಭೂಕುಸಿತಗಳಿಂದಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಡೆಹ್ರಾಡೂನ್-ಪಾಂವಟಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಕೊಚ್ಚಿಕೊಂಡು ಹೋಗಿದೆ. ವ್ಯಾಪಕ ಭೂಕುಸಿತಗಳಿಂದಾಗಿ ಮಸ್ಸೂರಿ -ಡೆಹ್ರಾಡೂನ್ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News