×
Ad

ವೈದ್ಯರು, ಆರೋಗ್ಯಪಾಲನಾ ಸಿಬ್ಬಂದಿಯ ಸುರಕ್ಷತೆಗೆ ರಾಷ್ಟ್ರೀಯ ಕಾರ್ಯಪಡೆ ರಚನೆ

Update: 2024-08-20 21:00 IST

ಸುಪ್ರೀಂಕೋರ್ಟ್

ಹೊಸದಿಲ್ಲಿ : ದೇಶವನ್ನೇ ತಲ್ಲಣಗೊಳಿಸಿದ ಕೋಲ್ಕತಾ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ಕರ್ತವ್ಯದ ಸ್ಥಳದಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ವೈದ್ಯಕೀಯ ಸಿಬ್ಬಂದಿಯ ತೀವ್ರ ಕಳವಳಕ್ಕೆ ಸ್ಪಂದಿಸಿರುವ ಸುಪ್ರೀಂಕೋರ್ಟ್, ಸರ್ಜನ್-ಮೇಜರ್ ಆರ್.ಪಿ.ಸರಿನ್ ನೇತೃತ್ವದ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್)ಯನ್ನು ರಚಿಸಿದೆ.

ನೂತನ ರಾಷ್ಟ್ರೀಯ ಕಾರ್ಯಪಡೆಯು ದೇಶಾದ್ಯಂತದ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಆರೋಗ್ಯಪಾಲನಾ ಸಿಬ್ಬಂದಿಯ ಸುರಕ್ಷತೆ, ಭದ್ರತೆ ಹಾಗೂ ಸೌಲಭ್ಯಗಳನ್ನು ಖಾತರಿಪಡಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಿದೆ.

ಕೋಲ್ಕತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಮಂಗಳವಾರ ನಡೆಸಿದ ಆಲಿಕೆಯ ಸಂದರ್ಭ ನೂತನ ಕಾರ್ಯ ಪಡೆಯ ರಚನೆಯನ್ನು ಘೋಷಿಸಿತು.

ಕೋಲ್ಕತಾ ಕಿರಿಯ ವೈದ್ಯೆಯ ಅತ್ಯಾಚಾರ ಕೊಲೆ ಘಟನೆಯು ಅತ್ಯಂತ ಭಯಾನಕ ಹಾಗೂ ಬರ್ಬರವೆಂದು ಬಣ್ಣಿಸಿದ ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು, ರಾಜ್ಯದ ಆಡಳಿತಯಂತ್ರ ವ್ಯವಸ್ಥಿತವಾಗಿ ವಿಫಲವಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ನೂತನ ಕಾರ್ಯಪಡೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಆರೋಗ್ಯಪಾಲನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.

ಪ್ರಕರಣದ ಸಮರ್ಪಕ ತನಿಖೆ ನಡೆಸುವಲ್ಲಿ ನಿಷ್ಕ್ರಿಯತೆ ಹಾಗೂ ಆಸ್ಪತ್ರೆಯ ಮೇಲೆ ಗುಂಪು ದಾಳಿಗೆ ಆಸ್ಪದ ಮಾಡಿಕೊಟ್ಟಿದ್ದಕ್ಕಾಗಿ ಕೋಲ್ಕತಾ ಪೊಲೀಸರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ದೇಶಾದ್ಯಂತದ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಸಂಬಂಧಿಸಿ ಮೂರು ವಾರಗಳೊಳಗೆ ಮಧ್ಯಂತರ ವರದಿ ಹಾಗೂ 2 ತಿಂಗಳುಗಳೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

ಕೋಲ್ಕತಾ ಕಿರಿಯ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಯಾವುದೇ ಬಲಪ್ರಯೋಗ ಮಾಡಕೂಡದೆಂದು ನ್ಯಾಯಾಲಯವು ಪಶ್ಚಿಮಬಂಗಾಳ ಸರಕಾರಕ್ಕೆ ತಾಕೀತು ಮಾಡಿತು.

ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಆಗಸ್ಟ್ 22ರೊಳಗೆ ಸಲ್ಲಿಸುವಂತೆಯೂ ಸಿಬಿಐ ಸುಪ್ರೀಂಕೋರ್ಟ್‌ಗೆ ನಿರ್ದೇಶನ ನೀಡಿದೆ.

ಪಶ್ಚಿಮಬಂಗಾಳ ಸರಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 37 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ 50 ಎಫ್‌ಐಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆಸ್ಪತ್ರೆಗಳಲ್ಲಿ ವಸ್ತುಶಃ ವೈದ್ಯರ ಸುರಕ್ಷತೆಯ ಕೊರತೆಯಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ವೈದ್ಯರು ಹಾಗೂ ಅನಿವಾಸಿ ವೈದ್ಯರುಗಳು ಹೆಚ್ಚು ದುರ್ಬಲರಾಗಿದ್ದಾರೆ. ಯುವವೈದ್ಯರುಗಳನ್ನು ದೀರ್ಘ ತಾಸುಗಳವರೆಗೆ ಕೆಲಸ ಮಾಡಿಸಲಾಗುತ್ತದೆ ಎಂದು ಆದೇಶವು ತಿಳಿಸಿದೆ.

ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಸುರಕ್ಷಿತ ಪರಿಸ್ಥಿತಿಯನ್ನು ರೂಪಿಸುವುದಕ್ಕೆ ರಾಷ್ಟ್ರೀಯ ನಿಯಮಾವಳಿಯೊಂದನ್ನು ರೂಪಿಸಬೇಕಾಗಿದೆ ಎಂದು ನ್ಯಾಯಪೀಠವು ತಿಳಿಸಿತು.

ನೂತನ ಕಾರ್ಯಪಡೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆಗಾಗಿ ರೂಪಿಸಲಿರುವ ಕಾರ್ಯಯೋಜನೆಯ ಕೆಲವು ಮುಖ್ಯಾಂಶಗಳು

1. ಕಾರ್ಯನಿರತ ಇಂಟರ್ನ್‌ಗಳು, ಸನಿವಾಸಿ (ರೆಸಿಡೆಂಟ್), ಅನಿವಾಸಿ (ನಾನ್ ರೆಸಿಡೆಂಟ್) ವೈದ್ಯರುಗಳು ಗೌರವಯುತವಾಗಿ ಕಾರ್ಯನಿರ್ವಹಿಸಲು ರಾಷ್ಟ್ರೀಯ ಯೋಜನೆಯನ್ನು ರೂಪಿಸಲಿದೆ.

2. ತುರ್ತು (ಎಮರ್ಜೆನ್ಸಿ) ಚಿಕಿತ್ಸಾ ಕೊಠಡಿಯ ಹೆಚ್ಚುವರಿ ಭದ್ರತೆ.

3.ಮಾರಕಾಯುಧಗಳನ್ನು ಆಸ್ಪತ್ರೆಯೊಳಗೆ ತರುವುದನ್ನು ತಡೆಯಲು ಬ್ಯಾಗೇಜ್ ಸ್ಕ್ರೀನಿಂಗ್

4. ರೋಗಿಗಳಲ್ಲದವರನ್ನು ಸೀಮಿತ ಸ್ಥಳಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ

4. ಗುಂಪು ನಿರ್ವಹಣೆಗೆ ಭದ್ರತಾ ವ್ಯವಸ್ಥೆ

5. ಎಲ್ಲಾ ಸ್ಥಳಗಳಲ್ಲಿ ಸಮಪರ್ಕ ವಿದ್ಯುತ್‌ ದೀಪದ ವ್ಯವಸ್ಥೆ ಹಾಗೂ ಸಿಸಿ ಕ್ಯಾಮರಾ ಅಳವಡಿಕೆ

6. ಎಲ್ಲಾ ವೈದ್ಯಕೀಯ ವೃತ್ತಿಪರರಿಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6:00 ಗಂಟೆಯವರೆಗ ಸಾರಿಗೆ ಸೌಲಭ್ಯ.

6. ಸಾಂಸ್ಥಿಕ ಸುರಕ್ಷತಾ ಕ್ರಮಗಳ ಬಗ್ಗೆ ತ್ರೈಮಾಸಿಕ ಪರಿಶೋಧನೆ

7. ಎಮರ್ಜೆನ್ಸಿ ವೈದ್ಯಕೀಯ ವೃತ್ತಿಪರರಿಗೆ ಹೆಲ್ಪ್‌ಲೈನ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News