ಉತ್ತರ ಪ್ರದೇಶ| ಲಕ್ನೋ ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್‌ನಲ್ಲಿ ಬೆಡ್ ಕೊರತೆ; ಬಿಜೆಪಿ ಮಾಜಿ ಸಂಸದನ ಪುತ್ರನ ಸಾವು
ಹೊಸದಿಲ್ಲಿ: ಬಿಜೆಪಿಯ ಮಾಜಿ ಸಂಸದ ಭೈರೋ ಪ್ರಸಾದ್ ಮಿಶ್ರಾ ಅವರ ಪುತ್ರ, 41 ವರ್ಷದ ಪ್ರಕಾಶ್ ಮಿಶ್ರಾ ಅವರು ಲಕ್ನೋದ ಎಸ್‌ಜಿಪಿಜಿಐ ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್‌ನಲ್ಲಿ ಬೆಡ್ ಕೊರತೆಯಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಮಗನನ್ನು ಕಳೆದುಕೊಂಡ ದುಃಖತಪ್ತ ಪ್ರಸಾದ್ ಮಿಶ್ರಾ ಅವರು ತಮ್ಮ ಮಗನ ಮೃತದೇಹವನ್ನು ಇರಿಸಿ ವಾರ್ಡ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ತಪ್ಪಿತಸ್ಥ ವೈದ್ಯರನ್ನು ಅಮಾನತುಗೊಳಿಸಿ ಮುಂದಿನ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಅವರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್ ಅವರನ್ನು ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎಮರ್ಜನ್ಸಿ ವಾರ್ಡ್‌ನಲ್ಲಿ ಬೆಡ್ ಇರಲಿಲ್ಲ ಹಾಗೂ ಅಲ್ಲಿದ್ದ ಎಮರ್ಜನ್ಸಿ ವೈದ್ಯಕೀಯ ಅಧಿಕಾರಿ ಯಾವುದೇ ರೀತಿಯಲ್ಲಿ ಸಹಾಯ ಮಾಡದೇ ಇದ್ದುದರಿಂದ ತಮ್ಮ ಪುತ್ರ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಬಂಡ ಕ್ಷೇತ್ರದ ಮಾಜಿ ಸಂಸದರಾಗಿರುವ ಪ್ರಸಾದ್ ಮಿಶ್ರಾ ಆರೋಪಿಸಿದ್ದಾರೆ.
“ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಆದರೆ ಈ ಜನರು ಮತ್ತೆ ತಪ್ಪು ಮಾಡದಂತೆ ಪ್ರತಿಭಟನೆ ನಡೆಸಿದ್ದೇನೆ. ನಾನು ಪ್ರತಿಭಟನೆ ನಡೆಸುವ ವೇಳೆ ಎಲ್ಲರೂ ಆತನ ಬಗ್ಗೆ ದೂರುತ್ತಿದ್ದರು, ಆತನಿಗೆ ಶಿಕ್ಷೆಯಾಗಬೇಕು,”ಎಂದರು.
ಈ ಘಟನೆಯ ಬಗ್ಗೆ ಕಠಿಣ ಕ್ರಮಕೈಗೊಳ್ಳುವ ಭರವಸೆಯನ್ನು ಆಸ್ಪತ್ರೆಯ ಅಧಿಕಾರಿಗಳು ನೀಡಿದ್ದು ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನೂ ರಚಿಸಲಾಗಿದೆ.
ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, “ಇದು ಆಸ್ಪತ್ರೆಯ ತಪ್ಪಲ್ಲ. ಇದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ತಪ್ಪು. ಆಸ್ಪತ್ರೆಗಳಿಗೆ ಅನುದಾನ ಏಕೆ ನೀಡಲಾಗುತ್ತಿಲ್ಲ?” ಎಂದು ಪ್ರಶ್ನಿಸಿದರು.
ಪ್ರಸಾದ್ ಮಿಶ್ರಾ ಅವರನ್ನು ಭೇಟಿಯಾದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕಠಿಣ ಕ್ರಮದ ಆಶ್ವಾಸನೆ ನೀಡಿದ್ದಾರೆ.