ಹೈಕೋರ್ಟ್ ತರಾಟೆ ಬಳಿಕ ಕೇಜ್ರಿವಾಲ್‌ಗೆ ಸರಕಾರಿ ಬಂಗಲೆ ಮಂಜೂರು ಮಾಡಿದ ಕೇಂದ್ರ ಸರಕಾರ
ಅರವಿಂದ್ ಕೇಜ್ರಿವಾಲ್ (Photo: PTI)
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರಿ ಬಂಗಲೆ ತೊರೆದ ಒಂದು ವರ್ಷದ ಬಳಿಕ, ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊನೆಗೂ ಕೇಂದ್ರ ಸರಕಾರ ಲೋಧಿ ಎಸ್ಟೇಟ್‌ನಲ್ಲಿ ಟೈಪ್-7 ಬಂಗಲೆ ಮಂಜೂರು ಮಾಡಿದೆ Indian Express ವರದಿ ಮಾಡಿದೆ.
ರಾಷ್ಟ್ರೀಯ ಪಕ್ಷದ ಸಂಚಾಲಕರಾಗಿ ಕೇಜ್ರಿವಾಲ್ ದಿಲ್ಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ವಾಸಕ್ಕೆ ಅರ್ಹರಾಗಿದ್ದಾರೆ. ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಎಸ್ಟೇಟ್ ನಿರ್ದೇಶನಾಲಯದಿಂದ ಬಂಗಲೆ ಮಂಜೂರಾಗಲು ವಿಳಂಬವಾದ ಕಾರಣ ಕೇಜ್ರಿವಾಲ್ ಅವರು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಮೊದಲು ದಿಲ್ಲಿ ಹೈಕೋರ್ಟ್ ಕೇಜ್ರಿವಾಲ್‌ಗೆ ನಿವಾಸ ಹಂಚಿಕೆಯನ್ನು ವಿಳಂಬ ಮಾಡಿದ್ದಕ್ಕಾಗಿ ಕೇಂದ್ರವನ್ನು ಟೀಕಿಸಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಸರಕಾರಿ ವಸತಿಗೆ ಯಾರು ಅರ್ಹರು ಎಂಬುದನ್ನು ಕೇಂದ್ರವು ಆಯ್ದು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಎಸ್ಟೇಟ್ ನಿರ್ದೇಶನಾಲಯದ ಜುಲೈ 2014ರ ನೀತಿಯ ಪ್ರಕಾರ, ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಅಥವಾ ಸಂಚಾಲಕರು ವಸತಿ ಸೌಕರ್ಯಕ್ಕೆ ಅರ್ಹರಾಗಿರುತ್ತಾರೆ.