×
Ad

"ಹಿರಿಯ ನಾಯಕರೇ ಹರ್ಯಾಣದಲ್ಲಿ ಪಕ್ಷದ ಸೋಲಿಗೆ ಕಾರಣ" : ಮಾಜಿ ಸಚಿವ ಸಂಪತ್ ಸಿಂಗ್ ಕಾಂಗ್ರೆಸ್‌ಗೆ ರಾಜೀನಾಮೆ

Update: 2025-11-03 10:52 IST

Photo | indianexpress

ಚಂಡೀಗಢ: ಹರ್ಯಾಣದ ಹಿರಿಯ ಕಾಂಗ್ರೆಸ್ ನಾಯಕ, ಆರು ಬಾರಿಯ ಶಾಸಕ ಹಾಗೂ ಮಾಜಿ ಸಚಿವ ಸಂಪತ್ ಸಿಂಗ್ ಅವರು ರವಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

2024ರ ವಿಧಾನಸಭಾ ಚುನಾವಣೆಯ ಸೋಲಿಗೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಕಾರಣರಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

2024ರ ವಿಧಾನಸಭಾ ಚುನಾವಣೆಯಲ್ಲಿ “ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ನಿಷ್ಠಾವಂತರನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಾಯಿತು” ಎಂದು ಸಂಪತ್ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ.

“ನನಗೆ ನಿರಾಳವಾಗಿದೆ. ನಾಳೆ ಮುಂದಿನ ರಾಜಕೀಯ ದಿಕ್ಕಿನ ಬಗ್ಗೆ ನಿರ್ಧರಿಸುತ್ತೇನೆ” ಎಂದು 76 ವರ್ಷದ ಸಂಪತ್ ಸಿಂಗ್ ಅವರು Indian Expressಗೆ ಪ್ರತಿಕ್ರಿಯಿಸಿದ್ದಾರೆ.

ತಮ್ಮ ರಾಜೀನಾಮೆ ಪತ್ರದಲ್ಲಿ ಸಂಪತ್ ಸಿಂಗ್, 2024ರ ಚುನಾವಣೆಗಳಲ್ಲಿ ಕಾಂಗ್ರೆಸ್ ನಾಯಕತ್ವದ ವಿಫಲತೆಯ ಬಗ್ಗೆ ತೀವ್ರವಾಗಿ ಟೀಕೆ ಮಾಡಿದ್ದಾರೆ. “ಸಮರ್ಥ ಹಾಗೂ ನಿಷ್ಠಾವಂತ ನಾಯಕರನ್ನು ಕಡೆಗಣಿಸಿ, ಹಣ ಮತ್ತು ಅಧಿಕಾರದ ಆಧಾರದ ಮೇಲೆ ಟಿಕೆಟ್ ಹಂಚಿಕೆ ನಡೆಯಿತು. ಕೆಲವರು ಆಪ್ತರನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾದರು,” ಎಂದು ಅವರು ಹೇಳಿದ್ದಾರೆ.

ಸಂಪತ್ ಸಿಂಗ್ ಅವರು ಕಾಂಗ್ರೆಸ್‌ನೊಳಗಿನ ಗುಂಪು ರಾಜಕೀಯವನ್ನು ಬಯಲು ಮಾಡುತ್ತಾ, ಮಾಜಿ ಸಿಎಂ ಭಜನ್ ಲಾಲ್, ಕುಲದೀಪ್ ಬಿಷ್ಣೋಯ್, ಕಿರಣ್ ಚೌಧರಿ, ಹಾಗೂ ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಮುಂತಾದವರು ಇದೇ ಕಾರಣದಿಂದ ಕಾಂಗ್ರೆಸ್ ತೊರೆಯಬೇಕಾಯಿತು ಎಂದು ಉಲ್ಲೇಖಿಸಿದ್ದಾರೆ.

“ಲೋಕಸಭಾ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್‌ಗೆ ವ್ಯಾಪಕವಾಗಿ ಬೆಂಬಲ ನೀಡಿದ್ದರು. ಆದರೆ ರಾಜ್ಯ ನಾಯಕತ್ವವು ಕುಮಾರಿ ಸೆಲ್ಜಾ ಅವರನ್ನು ಕಡೆಗಣಿಸಿ, ಅವರ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಯಲು ಅವಕಾಶ ನೀಡಿತು. ಇದರ ಪರಿಣಾಮವಾಗಿ ದಲಿತರು ಕಾಂಗ್ರೆಸ್‌ ನಿಂದ ದೂರವಾದರು,” ಎಂದು ಸಂಪತ್ ಸಿಂಗ್ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕುಟುಂಬದತ್ತ ಪರೋಕ್ಷವಾಗಿ ಟೀಕೆ ಮಾಡಿದ ಸಂಪತ್ ಸಿಂಗ್, “ರಾಜ್ಯ ನಾಯಕತ್ವವು ಪಕ್ಷದ ಹಿತಕ್ಕಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ. 2020ರಲ್ಲಿ ರಾಜ್ಯಸಭಾ ಸ್ಥಾನ ಖಾಲಿಯಾಗಿದ್ದಾಗ ಹೂಡಾ ಅವರ ಮಗ ದೀಪೇಂದ್ರ ಹೂಡಾ ಅವರನ್ನು ನಾಮನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಪ್ರಾದೇಶಿಕ ಕುಟುಂಬ ಉದ್ಯಮವಾಗಿ ಪರಿವರ್ತಿಸಲಾಗಿದೆ,” ಎಂದು ಹೇಳಿದ್ದಾರೆ.

“2009ರಿಂದ ಕಾಂಗ್ರೆಸ್‌ನ ಅದೃಷ್ಟ ಕುಸಿಯುತ್ತಿದೆ. ಪ್ರತಿಯೊಂದು ಎಚ್ಚರಿಕೆಯನ್ನೂ ನಿರ್ಲಕ್ಷಿಸಲಾಗಿದೆ. 2024ರ ಚುನಾವಣೆ ಪಕ್ಷದ ಒಳಗಿನ ಕುಸಿತದ ಜೀವಂತ ಸಾಕ್ಷಿಯಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ

2019ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಬಳಿಕ ಸಂಪತ್ ಸಿಂಗ್ ಬಿಜೆಪಿ ಸೇರಿದ್ದರು. ಆದರೆ 2022ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. 2024ರ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಸಿಗದ ಕಾರಣ ಅವರು ಅಸಮಾಧಾನಗೊಂಡಿದ್ದರು.

“ಹರ್ಯಾಣಕ್ಕೆ ನನ್ನ ಬದ್ಧತೆ ಶಾಶ್ವತವಾದರೂ, ಪ್ರಸ್ತುತ ಕಾಂಗ್ರೆಸ್ ನಾಯಕತ್ವದ ಮೇಲಿನ ನಂಬಿಕೆ ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಆದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ,” ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

“ಹರ್ಯಾಣದ ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸಾಮರ್ಥ್ಯ ಕಾಂಗ್ರೆಸ್‌ನಲ್ಲಿ ಇನ್ನು ಉಳಿದಿಲ್ಲ. ನಾನು ನನ್ನ ಜನರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳಲು ಬಯಸುತ್ತೇನೆ. ಆದರೆ ಪ್ರಸ್ತುತ ನಾಯಕತ್ವದ ಮೇಲೆ ನನಗೆ ನಂಬಿಕೆ ಉಳಿದಿಲ್ಲ,” ಎಂದು ಸಂಪತ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ಪಕ್ಷ ಸೇರುವುದು ಅಥವಾ ಬಿಡುವುದು ವೈಯಕ್ತಿಕ ಆಯ್ಕೆ. ಟಿಕೆಟ್ ಸಿಗದವರು ಇಂತಹ ಆರೋಪಗಳನ್ನು ಮಾಡುವುದು ಹೊಸದೇನಲ್ಲ,” ಎಂದು ಸಂಪತ್ ಸಿಂಗ್ ಅವರ ಆರೋಪದ ಬಗ್ಗೆ ಹರ್ಯಾಣ ಕಾಂಗ್ರೆಸ್ ನಾಯಕ ಕೇವಲ್ ಧಿಂಗ್ರಾ ಪ್ರತಿಕ್ರಿಯಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News