ಮಾದಕ ದ್ರವ್ಯ ಜಾಲದ ಸೂತ್ರಧಾರಿ ಮಾಜಿ ಎನ್‌ಎಸ್‌ಜಿ ಕಮಾಂಡೊ ಬಂಧನ
ಬಜ್‌ರಂಗ್ ಸಿಂಗ್ | Photo Credit : NDTV
ಹೊಸದಿಲ್ಲಿ, ಅ. 3: 26/11ರ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಸಿರುವ ಮಾಜಿ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಕಮಾಂಡೊ ಒಬ್ಬನನ್ನು ಮಾದಕ ದ್ರವ್ಯ ಜಾಲವೊಂದನ್ನು ನಡೆಸುತ್ತಿರುವ ಆರೋಪದಲ್ಲಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಾಜಿ ಕಮಾಂಡೊ ಬಜ್‌ರಂಗ್ ಸಿಂಗ್‌ನನ್ನು ರಾಜಸ್ಥಾನದ ಚುರು ಜಿಲ್ಲೆಯ ರತನ್‌ಗಢ ಎಂಬಲ್ಲಿಂದ ಬುಧವಾರ ರಾತ್ರಿ ಬಂಧಿಸಲಾಗಿದೆ. ಆತನಿಂದ 200 ಕಿಲೋಗ್ರಾಮ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜ್‌ರಂಗ್ ಸಿಂಗ್ ತೆಲಂಗಾಣ ಮತ್ತು ಒಡಿಶಾದಿಂದ ಗಾಂಜಾವನ್ನು ರಾಜಸ್ಥಾನಕ್ಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದನು ಎಂದು ಪೊಲೀಸರು ಆರೋಪಿಸಿದ್ದಾರೆ. ರಾಜಸ್ಥಾನದ ಸಿಕರ್ ಜಿಲ್ಲೆಯ ನಿವಾಸಿಯಾಗಿರುವ ಸಿಂಗ್‌ನ ತಲೆಗೆ 25,000 ರೂ. ಬಹುಮಾನ ಘೋಷಿಸಲಾಗಿತ್ತು.
ಬಜರಂಗ್ ಸಿಂಗ್ 10ನೇ ತರಗತಿಯ ಬಳಿಕ ಗಡಿಭದ್ರತಾ ಪಡೆ (ಬಿಎಸ್‌ಎಫ್) ಸೇರಿದನು. ಆ ಸಂದರ್ಭದಲ್ಲಿ ಆತ ಪಂಜಾಬ್, ಅಸ್ಸಾಮ್, ರಾಜಸ್ಥಾನ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡಿದ್ದನು.
ಬಳಿಕ, ಅವನು ಎನ್‌ಎಸ್‌ಜಿ ಕಮಾಂಡೊ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದನು. 2008ರಲ್ಲಿ, ಮುಂಬೈ ಭಯೋತ್ಪಾದಕ ದಾಳಿಯ ವೇಳೆ ನಡೆದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಅವನು ಭಾಗವಹಿಸಿದ್ದನು.