ಭಾರತ-ನೇಪಾಳ ಗಡಿ ಮೂಲಕ ಬಿಹಾರ ಪ್ರವೇಶಿಸಲು ಯತ್ನ ನಾಲ್ವರು ಚೀನಾ ಪ್ರಜೆಗಳ ಬಂಧನ
PC : idrw.org
ಪಾಟ್ನಾ: ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಿದ ಕೆಲವು ಗಂಟೆಗಳಲ್ಲಿ ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸೌಲ್ ಗಡಿಯ ಸಮೀಪ ಗುರುವಾರ ನೇಪಾಳದಿಂದ ಭಾರತೀಯ ಭೂಭಾಗಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಈ ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಚೀನಾ ಪ್ರಜೆಗಳ ಮಾರ್ಗದರ್ಶಕರು ಎಂದು ಹೇಳಲಾದ ಇಬ್ಬರು ನೇಪಾಳಿ ಮಹಿಳೆಯರನ್ನು ಕೂಡ ವಿಚಾರಣೆಗಾಗಿ ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಕ್ಸೌರ್ ಗಡಿಯಲ್ಲಿ ನಿಯೋಜಿಸಿರುವ ಶಸಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಅಧಿಕಾರಿ ತಿಳಿಸಿದ್ದಾರೆ.
ಭಾರತ ಪ್ರವೇಶಿಸಲು ಚೀನಾ ಪ್ರಜೆಗಳಲ್ಲಿ ಸಮರ್ಪಕವಾದ ವೀಸಾ ಇರಲಿಲ್ಲ. ಆದರೂ ಅವರು ಗಡಿ ದಾಟಲು ಹಾಗೂ ಭಾರತದ ಭೂಭಾಗ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅವರ ಚಟುವಟಿಕೆಗಳು ಅನುಮಾನಾಸ್ಪದವೆಂದು ಕಂಡುಬಂದ ಬಳಿಕ ಎಲ್ಲಾ ನಾಲ್ಕು ಮಂದಿ ಚೀನಾ ಪ್ರಜೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಅವರನ್ನು ರಕ್ಸೌಲ್ ಪೊಲೀಸ್ ಠಾಣೆಯಲ್ಲಿ ವಶದಲ್ಲಿ ಇರಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಬಂಧಿತ ಚೀನಾ ಪ್ರಜೆಗಳು ತಮ್ಮನ್ನು ಲಿ ಥಂಗಧೇ, ಡೆನ್ ಬಿರೆನ್, ಹಿನ್ ಕ್ಯುನ್ ಹೈನ್ಸೆ ಹಾಗೂ ಹೌಂಗ್ ಲಿಬಿನ್ ಎಂದು ಪರಿಚಯಿಸಿಕೊಂಡಿದ್ದಾರೆ. ಎಸ್‌ಎಸ್‌ಬಿ ಅವರಿಂದ ಐದು ಮೊಬೈಲ್ ಫೋನ್ ಹಾಗೂ 8,000 ಮೌಲ್ಯದ ಚೀನಾ ಕರೆನ್ಸಿಯನ್ನು ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.