×
Ad

ರಾಜಸ್ಥಾನ | ಪೈಪ್ ಲೈನ್ ಮುಚ್ಚುವಾಗ ಮಣ್ಣು ಕುಸಿದು ನಾಲ್ವರ ಮೃತ್ಯು; ಐವರು ಮಣ್ಣಿನಡಿ ಸಿಲುಕಿರುವ ಶಂಕೆ

Update: 2025-06-29 12:56 IST

PC | Indian Express

ಜೈಪುರ: ರವಿವಾರ ಬೆಳಗ್ಗೆ ರಾಜಸ್ಥಾನದ ಭರತ್ ಪುರ್ ನಲ್ಲಿ ಪೈಪ್ ಲೈನ್ ಮುಚ್ಚುವಾಗ ಮಣ್ಣು ಕುಸಿದ ಪರಿಣಾಮ, ನಾಲ್ವರು ಮೃತಪಟ್ಟು, ಐವರು ಮಣ್ಣಿನಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಂಗಿ ಕ ನಗ್ಲಾ ಬಳಿ ಕೊಳವೆ ಮಾರ್ಗವನ್ನು ನಿರ್ಮಿಸಲು 10 ಅಡಿ ಆಳ ತೋಡಲಾಗಿದ್ದ ಕಂದಕವನ್ನು ಕೆಲವು ಕೂಲಿ ಕಾರ್ಮಿಕರು ಭರ್ತಿ ಮಾಡುತ್ತಿರುವಾಗ, ಮಣ್ಣು ಕಂದಕದೊಳಕ್ಕೆ ಕುಸಿದಿದೆ ಎಂದು ಹೇಳಲಾಗಿದೆ.

ಈ ಘಟನೆಯಲ್ಲಿ 11 ಮಂದಿ ಕೂಲಿ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದು, ಅವರ ಕೂಗಾಟವನ್ನು ಕೇಳಿ ಸ್ಥಳಕ್ಕೆ ಧಾವಿಸಿದ ಇನ್ನಿತರ ಕೂಲಿ ಕಾರ್ಮಿಕರು ಹಾಗೂ ಯೋಜನಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ, ಮಣ್ಣಿನ ಆಳ ಹಾಗೂ ಭಾರ ಈ ಪ್ರಯತ್ನಗಳಿಗೆ ತೊಂದರೆಯನ್ನೊಡ್ಡಿತು ಎಂದು ಅವರು ತಿಳಿಸಿದ್ದಾರೆ.

ಘಟನೆಯ ಕುರಿತು ಸುದ್ದಿ ತಿಳಿಯುತ್ತಿದ್ದಂತೆಯೇ, ಜಿಲ್ಲಾಡಳಿತ, ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಕಂದಕಕ್ಕೆ ಉರುಳಿದ್ದ ಮಣ್ಣನ್ನು ಹೊರ ತೆಗೆಯಲು ಹಾಗೂ ಮಣ್ಣಿನಡಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲು ರಕ್ಷಣಾ ತಂಡಗಳು ಅರ್ತ್ ಮೂವಿಂಗ್ ಯಂತ್ರಗಳನ್ನು ಬಳಸಿದವು.

ಈ ವೇಳೆ, ರಕ್ಷಣಾ ತಂಡಗಳು ಆರು ಮಂದಿಯನ್ನು ಮಣ್ಣಿನಿಂದ ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಪೈಕಿ ಘಟನೆಯಲ್ಲಿ ಮೃತಪಟ್ಟಿರುವ ನಾಲ್ವರ ಮೃತದೇಹಗಳೂ ಸೇರಿವೆ. ಉಳಿದಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನುಳಿದ ಐವರು ಈಗಲೂ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News