×
Ad

ಗೃಹ ಸಚಿವರ ಆಪ್ತ ಎಂದು ಬಿಂಬಿಸಿ ವಂಚನೆ: ಬಿಜೆಪಿ ಕಾರ್ಯಕರ್ತ ಬಂಧನ

Update: 2023-09-23 20:49 IST

ಸಾಂದರ್ಭಿಕ ಚಿತ್ರ | Photo: PTI 

ಅಂಬಾಲಾ‌: ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರ ವಿಶೇಷ ಕರ್ತವ್ಯದ ಅಧಿಕಾರಿ ಮತ್ತು ಆಪ್ತ ಎಂದು ಬಿಂಬಿಸಿ ವಂಚಿಸುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 18 ಲಕ್ಷ ರೂ ಪಡೆದು ವಂಚಿಸಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತ ಆಶಿಶ್‌ ಗುಲಾಟಿ ಎಂಬಾತನನ್ನು ಬಂಧಿಸಲಾಗಿದೆ.

ಸ್ವತಃ ಗೃಹ ಸಚಿವ ಅನಿಲ್‌ ವಿಜ್‌ ಅವರೇ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೋರ್ವ ಆರೋಪಿ ಲಕ್ಷಯ್‌ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿಗಳು 18 ಲಕ್ಷ ರೂ. ವಸೂಲಿ ಮಾಡಿದ್ದರು ಎಂದು ಮನೀಶ್ ಗಾರ್ಗ್ ಎಂಬವರು ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ಗಮನಕ್ಕೆ ಬಂದ ತಕ್ಷಣ ಗೃಹ ಸಚಿವರು ಪೊಲೀಸ್‌ ಮಹಾನಿರ್ದೇಶಕರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಆರೋಪಿಗಳು ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ನಕಲಿ ನೇಮಕಾತಿಯನ್ನು ನೀಡಿ ವಂಚಿಸಿದ್ದು, ಅಮಾನತ್ತಾದ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಸಹಾಯ ಮಾಡುವುದಾಗಿಯೂ ಹಣ ಪಡೆದಿದ್ದಾರೆ ಎಂಬ ಆರೋಪ ಆರೋಪಿಗಳ ಮೇಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News