×
Ad

ಸೇನೆಯನ್ನು ಅವಹೇಳನ ಮಾಡುವುದನ್ನು ವಾಕ್‌ ಸ್ವಾತಂತ್ರ್ಯ ಅನುಮತಿಸುವುದಿಲ್ಲ : ರಾಹುಲ್ ಗಾಂಧಿಗೆ ಹೈಕೋರ್ಟ್ ತರಾಟೆ

Update: 2025-06-04 19:58 IST

ರಾಹುಲ್‌ ಗಾಂಧಿ | PC : PTI 

ಹೊಸದಿಲ್ಲಿ : ಭಾರತೀಯ ಸೈನಿಕರ ಕುರಿತಾದ ಹೇಳಿಕೆಗೆ ಸಂಬಂಧಿಸಿ ರಾಹುಲ್ ಗಾಂಧಿಗೆ ಅಲಹಾಬಾದ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವಾಕ್ ಸ್ವಾತಂತ್ರ್ಯವು ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಸ್ವಾತಂತ್ರ್ಯವನ್ನು ನೀಡುವುದಿಲ್ಲ ಎಂದು ಹೇಳಿದೆ.

ʼನಿಸ್ಸಂದೇಹವಾಗಿಯೂ ಸಂವಿಧಾನದ 19(1)(a) ವಿಧಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಆದರೆ, ಈ ಸ್ವಾತಂತ್ರ್ಯವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಮತ್ತು ಭಾರತೀಯ ಸೇನೆ ಬಗ್ಗೆ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುವ ಸ್ವಾತಂತ್ರ್ಯವನ್ನು ಒಳಗೊಂಡಿಲ್ಲʼ ಎಂದು ನ್ಯಾಯಾಲಯ ಹೇಳಿದೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಕುರಿತಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯ ಹೊರಡಿಸಿದ ಸಮನ್ಸ್ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವಾಗ ಹೈಕೋರ್ಟ್ ಈ ಹೇಳಿಕೆ ನೀಡಿದೆ.

2022ರಲ್ಲಿ ರಾಜಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ʼಜನರು ಭಾರತ್ ಜೋಡೋ ಯಾತ್ರೆ ಬಗ್ಗೆ ಕೇಳುತ್ತಾರೆ, ಆದರೆ ಚೀನಾ 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡು 20 ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಬಗ್ಗೆ ಕೇಳುವುದಿಲ್ಲ. ಅರುಣಾಚಲ ಪ್ರದೇಶದಲ್ಲಿ ನಮ್ಮ ಸೈನಿಕರನ್ನು ಥಳಿಸಿದ ಬಗ್ಗೆ ಅವರು ಒಂದೇ ಒಂದು ಪ್ರಶ್ನೆಯನ್ನು ಕೇಳುವುದಿಲ್ಲ. ಭಾರತೀಯ ಪತ್ರಿಕೆಗಳು ಈ ಬಗ್ಗೆ ಅವರನ್ನು ಪ್ರಶ್ನಿಸುವುದಿಲ್ಲ. ಇದು ನಿಜವಲ್ಲವೇ? ಇಡೀ ದೇಶ ಇದನ್ನೆಲ್ಲಾ ನೋಡುತ್ತಿದೆ. ಜನರಿಗೆ ಗೊತ್ತಿಲ್ಲ ಎಂದು ನಟಿಸಬೇಡಿʼ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಬಿರ್‌ಒ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಈ ಕುರಿತು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News