×
Ad

ಮುಂಬೈ | ಮಧ್ಯರಾತ್ರಿ ಫ್ರೆಂಚ್ ಕಾನ್ಸುಲೇಟ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಸ್ಕೂಟರ್ ಸವಾರನ ಬಂಧನ

Update: 2025-11-17 13:06 IST

ಸಾಂದರ್ಭಿಕ ಚಿತ್ರ (PTI)

ಮುಂಬೈ: ಬಾಂದ್ರಾ ವೆಸ್ಟ್‌ನ ರಸ್ತೆಯಲ್ಲಿ ಮಧ್ಯರಾತ್ರಿ ನಡೆದುಕೊಂಡು ಹೋಗುತ್ತಿದ್ದ 27 ವರ್ಷದ ಫ್ರೆಂಚ್ ಮಹಿಳೆಯೊಬ್ಬರಿಗೆ ಸ್ಕೂಟರ್ ಸವಾರ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 8ರ ಬೆಳಗಿನ ಜಾವ ಸಂಭವಿಸಿದೆ ಎನ್ನಲಾಗಿದೆ. ಫ್ರೆಂಚ್ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ, ಪಾಲಿ ಹಿಲ್‌ ನಲ್ಲಿ ಸ್ನೇಹಿತನನ್ನು ಭೇಟಿ ಮಾಡಿ ತನ್ನ ನಿವಾಸಕ್ಕೆ ನಡೆದುಕೊಂಡು ಹೋಗುವ ವೇಳೆ ಸ್ಕೂಟರ್ ಸವಾರ ಒಮ್ಮೆಲೇ ಆಕೆಯ ಹಿಂದಿನಿಂದ ಬಂದು ಕಿರುಕುಳ ನೀಡಿ ಪರಾರಿಯಾದನು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ದಿನವೇ ದೂರು ದಾಖಲಾಗದಿದ್ದರೂ, ನವೆಂಬರ್ 14ರಂದು ಕಾನ್ಸುಲೇಟ್ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ ನಂತರ ತನಿಖೆಗೆ ವೇಗ ಸಿಕ್ಕಿದೆ. ಸ್ಥಳದ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆರೋಪಿ ಸುನಿಲ್ ವಾಘೇಲಾ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಕೂಟರ್‌ನ ನೋಂದಣಿ ಸಂಖ್ಯೆಯ ಸುಳಿವಿನ ಆಧಾರದ ಮೇಲೆ, ಖಾರ್ ಠಾಣೆ ಪೊಲೀಸರು 24 ಗಂಟೆಯೊಳಗೆ ಧಾರಾವಿಯಲ್ಲಿರುವ ಶಂಕಿತನ ಮನೆ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.

ಧಾರಾವಿ ಮೂಲದ ಗುಜರಿ ವ್ಯಾಪಾರಿಯಾಗಿರುವ ವಾಘೇಲಾ, ಆ ರಾತ್ರಿ ಬಾಂದ್ರಾದಲ್ಲಿ ಏನು ಮಾಡುತ್ತಿದನು ಹಾಗೂ ಮಹಿಳೆಯನ್ನು ಏಕೆ ಹಿಂಬಾಲಿಸುತ್ತಿದ್ದನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ತನಿಖೆಯಲ್ಲಿದೆ.

“ಕೆಲವು ಸಿಸಿಟಿವಿ ದೃಶ್ಯಾವಳಿಗಳು ಮಸುಕಾಗಿದ್ದರೂ, ಆರೋಪಿಯು ಮಹಿಳೆಯನ್ನು ಹಿಂಬಾಲಿಸುವ ಸ್ಪಷ್ಟ ಸುಳಿವುಗಳನ್ನು ನಾವು ಮರುಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ,” ಎಂದು ಖಾರ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.

ಎಫ್‌ಐಆರ್‌ ಅನ್ನು ಬಿಎನ್‌ಎಸ್ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಬಲವಂತ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧನದ ವೇಳೆ ಆರೋಪಿಯ ಮನೆಯ ಬಳಿಗೆ ಬಂದು ಕುಟುಂಬಸ್ಥರು ಹಾಗೂ ಸುತ್ತಲಿನ ಜನರು ಸೇರಿ ಗಲಾಟೆ ಮಾಡಿದ್ದರು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡರು. ರವಿವಾರ ವಾಘೇಲಾನನ್ನು ಬಾಂದ್ರಾ ರಜಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News