×
Ad

ಜಮ್ಮು ಕಾಶ್ಮೀರ: ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಮೃತ್ಯು, ನಾಲ್ವರಿಗೆ ಗಾಯ

Update: 2024-07-27 14:55 IST

Photo: ANI

ಹೊಸದಿಲ್ಲಿ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಲ ವಲಯದಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ನಡೆಸಿದ ದಾಳಿಯಲ್ಲಿ ಮೇಜರ್ ದರ್ಜೆಯ ಓರ್ವ ಅಧಿಕಾರಿ ಸೇರಿದಂತೆ ಐವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಪಾಕಿಸ್ತಾನಿ ನುಸುಳುಕೋರ ಕೂಡಾ ಹತನಾಗಿದ್ದಾನೆ ಎಂದು ವರದಿಯಾಗಿದೆ.

ಸೇನಾ ಮೂಲಗಳ ಪ್ರಕಾರ, ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳ ಸಿಬ್ಬಂದಿಗಳು ಹಾಗೂ ಉಗ್ರಗಾಮಿಗಳನ್ನು ಹೊಂದಿದ್ದ ಬಾರ್ಡರ್ ಆ್ಯಕ್ಷನ್ ಟೀಮ್ ತಂಡವು ಕಮಕರಿ ವಲಯದ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿತು ಎಂದು ಹೇಳಲಾಗಿದೆ.

ಆದರೆ, ಈ ಪ್ರಯತ್ನವನ್ನು ಜಾಗೃತ ಸ್ಥಿತಿಯಲ್ಲಿದ್ದ ಭಾರತದ ಸೇನಾ ತುಕಡಿಗಳು ವಿಫಲಗೊಳಿಸಿದವು.

“ಬಾರ್ಡರ್ ಆ್ಯಕ್ಷನ್ ಟೀಮ್ ಕೃತ್ಯವನ್ನು ಜಾಗೃತ ಸ್ಥಿತಿಯಲ್ಲಿದ್ದ ಭಾರತೀಯ ಸೇನಾ ತುಕಡಿಗಳು ಕಮಕರಿ ವಲಯದಲ್ಲಿ ವಿಫಲಗೊಳಿಸಿದವು. ಈ ಸಂದರ್ಭದಲ್ಲಿ ಓರ್ವ ಪಾಕಿಸ್ತಾನಿ ನುಸುಳುಕೋರನನ್ನು ಹತ್ಯೆಗೈಯ್ಯಲಾಯಿತು” ಎಂದು ಸೇನಾ ಮೂಲಗಳು ತಿಳಿಸಿವೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉತ್ತರ ಕಾಶ್ಮೀರ ಜಿಲ್ಲೆಯ ಟ್ರೆಹ್ಗಮ್ ವಲಯದಲ್ಲಿನ ಕಮಕಡಿ ಚೌಕಿ ಮೇಲೆ ಮೂವರು ನುಸುಳುಕೋರರು ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ತುಕಡಿಗಳೂ ಪ್ರತಿ ಗುಂಡಿನ ದಾಳಿ ನಡೆಸಿದ್ದು, ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ಮುಂದುವರಿಯಿತು ಎಂದೂ ಮೂಲಗಳು ತಿಳಿಸಿವೆ.

ಈ ಘಟನೆಯಲ್ಲಿ ಗಾಯಗೊಂಡಿರುವ ಸೇನಾ ಸಿಬ್ಬಂದಿಗಳನ್ನು ಸೇನಾ ನೆಲೆಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಪೈಕಿ ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News