×
Ad

ಭದ್ರತಾ ಕಳವಳ: ಜಲಂಧರ್ ಮೂಲಕ ಧರ್ಮಶಾಲಾದಿಂದ ದಿಲ್ಲಿಗೆ ಐಪಿಎಲ್ ತಂಡಗಳು ತಲುಪಿದ್ದು ಹೇಗೆ?

Update: 2025-05-09 23:06 IST

PC : PTI 

ಧರ್ಮಶಾಲಾ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಿರುವುದರಿಂದಾಗಿ, ಶುಕ್ರವಾರ ಧರ್ಮಶಾಲಾದಿಂದ ಪಂಜಾಬ್ ಕಿಂಗ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಬೆಂಗಾವಲಿನೊಂದಿಗೆ ಒಂದೊಂದು ಪ್ರತ್ಯೇಕ ತಂಡವನ್ನಾಗಿ ಹೋಶಿಯಾರ್ ಪುರ್ ಮೂಲಕ ಜಲಂಧರ್ ರೈಲ್ವೆ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು ಎಂದು ಕಾಂಗ್ರಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.

ಈ ತಂಡಗಳು ಇದೀಗ ವಿಶೇಷ ರೈಲಿನಲ್ಲಿ ಹೊಸ ದಿಲ್ಲಿಯತ್ತ ಪ್ರಯಾಣ ಬೆಳೆಸಿವೆ ಎಂದು ಅವರು ಹೇಳಿದ್ದಾರೆ.

ಚಂಡೀಗಢ ಬಳಿಯ ವಾಯು ಪ್ರದೇಶವನ್ನು ಅತಿಕ್ರಮವಾಗಿ ಪ್ರವೇಶಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡಿದ್ದರಿಂದಾಗಿ, ಗುರುವಾರದಂದು ಪಂಜಾಬ್ ಕಿಂಗ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು. ಇದರ ಬೆನ್ನಿಗೇ, ಭಾರತ ಕೂಡಾ ಪ್ರತೀಕಾರದ ದಾಳಿ ನಡೆಸಿತ್ತು.

“ಶುಕ್ರವಾರ ಬೆಳಗ್ಗೆ ಎಲ್ಲ ಆಟಗಾರರು, ತರಬೇತಿ ಸಿಬ್ಬಂದಿಗಳು ಹಾಗೂ ಪ್ರಸಾರ ಸಿಬ್ಬಂದಿಗಳನ್ನೊಳಗೊಂಡಂತೆ ಉಭಯ ತಂಡಗಳ ಸದಸ್ಯರನ್ನು ಸುಮಾರು 40ರಿಂದ 50 ಸಣ್ಣ ವಾಹನಗಳಲ್ಲಿ ಧರ್ಮಶಾಲಾದಿಂದ ಪಂಜಾಬ್ ಗಡಿಯಲ್ಲಿರುವ ಹೋಶಿಯಾರ್ ಪುರ್ ಗೆ ಸ್ಥಳಾಂತರಿಸಲಾಯಿತು” ಎಂದು ಅವರು ತಿಳಿಸಿದ್ದಾರೆ.

ಈ ವಾಹನಗಳಿಗೆ ಕಾಂಗ್ರಾ ಪೊಲೀಸರು ಬೆಂಗಾವಲು ಒದಗಿಸಿದ್ದರು ಹಾಗೂ ಈ ವಾಹನಗಳು ಹೋಶಿಯಾರ್ ಪುರ್ ತಲುಪುತ್ತಿದ್ದಂತೆಯೆ ಪಂಜಾಬ್ ಪೊಲೀಸರು ಭದ್ರತಾ ವ್ಯವಸ್ಥೆಗಳ ಉಸ್ತುವಾರಿಯನ್ನು ವಹಿಸಿಕೊಂಡರು ಎಂದು ಅವರು ಹೇಳಿದ್ದಾರೆ.

ನಂತರ, ಉಭಯ ತಂಡಗಳ ಸದಸ್ಯರನ್ನು ಜಲಂಧರ್ ನಿಂದ ವಿಶೇಷವಾಗಿ ವ್ಯವಸ್ಥೆಗೊಳಿಸಲಾಗಿದ್ದ ರೈಲು ಹತ್ತಿಸಲು ಹೋಶಿಯಾರ್ ಪುರ್ ನಿಂದ ಕರೆದೊಯ್ಯಲಾಯಿತು ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಭಾರತೀಯ ಸೇನೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಿಂದಾಗಿ, ಐಪಿಎಲ್ ಕ್ರೀಡಾಕೂಟದ ಉಳಿದ ಪಂದ್ಯಗಳನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸುವ ನಿರ್ಧಾರವನ್ನು ಬೆಳಗ್ಗೆ ಪ್ರಕಟಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News