×
Ad

G20 ಶೃಂಗ ಸಭೆ : ದಿಲ್ಲಿಯಲ್ಲಿ ಕೊಳೆಗೇರಿ, ಬಡ ಬಡಾವಣೆಗಳಿಗೆ ಹಸಿರು ಪರದೆ

Update: 2023-09-14 19:53 IST

Photo: PTI

ಜಿ20​ ಶೃಂಗಸಭೆಗೆ ದೆಹಲಿ ರಂಗುರಂಗಾಗಿ ರೆಡಿಯಾಗಿದೆ. ವಿದೇಶಿ ಗಣ್ಯರು ​ನೋಡಿದರೆ ಮನಸೋಲುವ ಹಾಗೆ ದೆಹಲಿ​ಯ ಪ್ರಮುಖ ಪ್ರದೇಶಗಳು ಝಗಮಗಿಸ್ತಿ​ವೆ.​ ಬಣ್ಣ ಬಣ್ಣದ ಗೋಡೆಗಳು, ಅಲಂಕಾರಿಕ ನಿರ್ಮಾಣಗಳು, ಕಾರಂಜಿಗಳು, ಆ ಕಾರಂಜಿಗಳಿಗೆ ರಾತ್ರಿ ಬಣ್ಣ ಬಣ್ಣದ ಲೈಟುಗಳು, ಆಕರ್ಷಕ ಪೈಟಿಂಗ್ ಗಳು ಹೀಗೆ ಜಿ 20 ಗಾಗಿ ದಿಲ್ಲಿಯನ್ನು ಮೇಕಪ್ ಮಾಡಿರುವ ಪಟ್ಟಿ ಬಹಳ ಉದ್ದವಿದೆ.

ಅಂದಹಾಗೆ ಮೋದಿ ಸರ್ಕಾರ ಕ್ಯಾಮೆರಾ ವರ್ಕ್​ ನಲ್ಲಿ ಸಿಕ್ಕಾಪಟ್ಟೆ ಎಕ್ಸ್ಪರ್ಟ್ಅನ್ನೋದು ಇಡೀ ದೇಶಕ್ಕೇ ಗೊತ್ತಿರೋ ವಿಚಾರ. ಜಿ20 ದೇಶಗಳ ಗಣ್ಯ​ರು ಮೋದಿ ಸರ್ಕಾರದ ಕ್ಯಾಮೆರಾ ವರ್ಕ್ ನೋಡಿ ವಾಹ್ ವಾಹ್ ಅನ್ನೋದು ಗ್ಯಾರಂಟಿ. ಯಾಕೆಂದರೆ, ಈ ಸರ್ಕಾರಕ್ಕೆ ಕ್ಯಾಮೆರಾ ವರ್ಕ್ನಲ್ಲಿ ಇರುವ ಪ್ರಾವೀಣ್ಯತೆಗಿಂತ ಹೆಚ್ಚಾಗಿ ಏನನ್ನು ಮಾತ್ರ ತೋರಿಸಬೇಕು, ಯಾವುದನ್ನು ತೋರಿಸಕೂಡದು ಅನ್ನೋ​ ಸೆನ್ಸಾರ್ಶಿಪ್ನಲ್ಲಂತೂ ಸೆನ್ಸಾರ್ ಬೋರ್ಡನ್ನೂ ಮೀರಿಸುವ ನೈಪುಣ್ಯ.

ಮರೆಮಾಚೋದು,​ ಇಲ್ಲದಿದ್ದರೆ ಅಕ್ರಮ ಎಂದು ಅದನ್ನು ನೆಲಸಮ ಮಾಡಿ ಬಿಡೋದು, ಸ್ಥಳಾಂತರ ಮಾಡೋದು ಅಥವಾ ಬೇಡಾಗಿರೋದನ್ನು ಇರುವಲ್ಲಿಯೇ ಮುಚ್ಚಿಹಾಕಿ, ಮೇಲೆ ಸುಣ್ಣ ಬಣ್ಣ ಹೊಡೆದು ತೋರಿಸೋದು ​ಈ ಸರ್ಕಾರಕ್ಕೆ ಚೆನ್ನಾಗಿಯೇ ಗೊತ್ತು. ​ಹಾಗಾಗಿ 80 ಕೋಟಿಗೂ ಹೆಚ್ಚು ಬಡವರಿಗೆ ಹಸಿವು ನೀಗಿಸಲು ಸರಕಾರ ಪಡಿತರ ಕೊಡುವ ದೇಶದ ರಾಜಧಾನಿ ದಿಲ್ಲಿ ವಿದೇಶಗಳ ಗಣ್ಯರ ಮುಂದೆ ಫಳಫಳಾಂತ ಹೊಳೆಯಲಿದೆ.​

​ಅಷ್ಟೇ ಅಲ್ಲ. ಈಗ ಬಂದಿರುವ ವರದಿ ಪ್ರಕಾರ ವಿದೇಶಿ ಗಣ್ಯರಿಗೆ ಚಿನ್ನ ಹಾಗು ಬೆಳ್ಳಿಯ ತಟ್ಟೆಗಳಲ್ಲೇ ಊಟ ಮಾಡಿಸುವ ವ್ಯವಸ್ಥೆ ಮಾಡಲಾಗಿದೆಯಂತೆ. ಅಲ್ಲಿಗೆ ವಿದೇಶಿ ಗಣ್ಯರು " ಭಾರತದಲ್ಲಿ ಹಸಿದವರು, ಬಡವರು, ಬೀದಿಪಾಲಾದವರು. ಕೊಳೆಗೇರಿಯ ಮಂದಿ, ಪ್ರವಾಹ ಪೀಡಿತರಾಗಿ ದಿಕ್ಕುಗೆಟ್ಟವರು ​, ಗಲಭೆ ಸಂತ್ರಸ್ತರಾಗಿ ಶಿಬಿರಗಳಲ್ಲಿ ವಾಸಿಸುತ್ತಿರುವವರು ಯಾರೂ ಇಲ್ಲ, ಇಡೀ ದೇಶ ಸುಭಿಕ್ಷವಾಗಿದೆ " ಎಂದು ಖುಷಿಯಿಂದ ಊಟ ಮಾಡಿ ಕೈತೊಳೆದುಕೊಳ್ಳಬಹುದು.

​ದಿಲ್ಲಿಯಲ್ಲೀಗ ಜಿ20 ವೈಭವ. ​ ಜಿ ೨೦ ವೈಭವ ಅನ್ನೋದಕ್ಕಿಂತಲೂ ಮೋದೀಜಿ ವೈಭವ. ಏಕೆಂದರೆ ದಿಲ್ಲಿಯ ಯಾವ ಗೋಡೆ, ಯಾವ ಕಂಬ ನೋಡಿದರೂ ಅಲ್ಲೀಗ ಮೋದೀಜಿ ಫೋಟೋವೇ ರಾರಾಜಿಸುತ್ತಿದೆ. ಜಿ 20 ಗೆ ಇಪ್ಪತ್ತು ದೇಶಗಳ ಗಣ್ಯರು ಬರುತ್ತಾರಾದರೂ ದಿಲ್ಲಿಯಲ್ಲಿ ಮಿಂಚುತ್ತಿರುವುದು ಕೇವಲ ಮೋದೀಜಿ ಫೋಟೋ ಮಾತ್ರ.

ಮೋ​ದೀಜಿ ಮಿಂಚುವಲ್ಲಿ, ಅವರ ಮುಖವನ್ನು, ಅವರ ಅದ್ದೂರಿ ವೇಷಭೂಷಣಗಳನ್ನು ವಿಜೃಂಭಿಸಿ ತೋರಿಸುವಲ್ಲಿ, ಅವರು ವಿದೇಶಿ ಗಣ್ಯರ ಕೈಕುಲುಕುತ್ತ ಪೋಸು ಕೊಡುವಲ್ಲಿ ಬಡವರು​, ಅವರ ಜೋಪಡಿಗಳು ಕಾಣುವು​ದು ಅಷ್ಟು ಸರಿಯಾಗುವುದಿಲ್ಲ ಅಲ್ವಾ ?​ ಆ ಫೋಟೋ ಫ್ರೇಮ್ನಲ್ಲಿ ದಿಲ್ಲಿಯ ಕೊಳೆಗೇರಿಗಳು ಇಣು​ಕಿದರೆ ಅದೆಷ್ಟು ಗಲೀಜು ?​ ಅಲ್ಲಲ್ಲ ಕೊಳಗೇರಿ ಇರುವುದು ಗಲೀಜಲ್ಲ, ಅದು ಮೋದೀಜಿ ಯವರ ಫೋಟೋದಲ್ಲಿ ಕಾಣೋದು ಗಲೀಜು. ಹಾಗಾಗಿ "ಕೆಟ್ಟದಾಗಿ" ಕಾಣುವ ಕಟ್ಟಡಗಳನ್ನು ಒಂದೋ ನೆಲಸಮ ಮಾಡಲಾಗಿದೆ, ಸ್ಥಳಾಂತರ ಮಾಡಲಾಗಿದೆ ಅಥವಾ ಅವುಗಳಿಗೆ ಹಸಿರು ಪರದೆ ಹಾಕಿ ಮುಚ್ಚಲಾಗಿದೆ.

​ಜೋ ಬೈಡನ್ ಗೆ, ರಿಷಿ ಸುನಾಕ್ ಗೆ , ಮ್ಯಾಕ್ರನ್ ಗೆ, ಟ್ರುಡೊ ಗೆ ಹಾಗೇ ಇನ್ನೂ ಹದಿನೈದು ದೇಶಗಳ ನಾಯಕರಿಗೆ ಭಾರತದಲ್ಲಿ ಹಾಗೆಲ್ಲ ಇರೋದು ಗೊತ್ತೇ ಇಲ್ಲ. ಹಾಗಾಗಿ ಅದನ್ನೆಲ್ಲ ತೋರಿಸಲು ಆಗುತ್ತದಾ ?. ಛೇ. ಅದು ಸಾಧ್ಯವೇ ಇಲ್ಲ. ಹಾಗಾಗುವುದಿಲ್ಲ. ಯಾಕೆಂದರೆ ವಿಶ್ವಗುರುವಿನ ದರ್ಬಾರಿನಲ್ಲಿ​ ದೇಶದಲ್ಲಿ ಎಲ್ಲವೂ ಸುಭಿಕ್ಷವಾಗಿದೆ. ದೆಹಲಿಯದ್ದಂತೂ ವೈಯಾರವೋ ವೈಯಾರ.

ವಿದೇಶಗಳ ಗಣ್ಯರು ಓಡಾಡಲಿರುವ ದಾರಿಗಳಂತೂ ಎಷ್ಟೆಲ್ಲ ಮುಚ್ಚುಮರೆ ಕುಶಲತೆಯ ಪರಿಣಾಮವಾಗಿ ಫುಲ್ ಮೇಕಪ್ಪಲ್ಲಿ ರೆಡಿಯಾಗಿವೆ. ಗಣ್ಯರು ಬರ್ತಾ ಇದ್ರೆ ಆ ಮಾರ್ಗಗಳು ಹಸಿರೋ ಹಸಿರು ಎಂಬಂತೆ ತೆರೆದುಕೊಳ್ತವೆ. ಆ ಹಸಿ​ರು ಪರದೆಯ ಮರೆಯ ಹಿಂದೆ ತಾಂಡವವಾಡುತ್ತಿರುವ ಬಡತನ, ಹಸಿವು, ನೋವು, ನಿಟ್ಟುಸಿರು ಎಲ್ಲವೂ​ ಈಗ ಬಾಯ್ಮುಚ್ಚಿಕೊಂಡು ಬಿದ್ದಿರಬೇಕು.​ ಯಾಕಂದ್ರೆ ಇದು ದೇಶದ ಇಮೇಜಿನ ಪ್ರಶ್ನೆ ! ಅದಕ್ಕಿಂತಲೂ ಮುಖ್ಯವಾಗಿ ಮೋದೀಜಿ ಇಮೇಜಿನ ಪ್ರಶ್ನೆ.

ವಿದೇಶಿ ಗಣ್ಯರನ್ನು ಬರ ಮಾಡಿಕೊಳ್ಳೋದಕ್ಕೆ ಏನು ಬಣ್ಣ ಏನು ಬೆಳಕು? ಅದೆಂಥ ಬಿನ್ನಾಣ, ಅದೆಂಥ ಥಳುಕು?. ಕಣ್ಣು ಕೋರೈಸೋ ದೀಪಗಳು, ಮನ ಸೂರೆಗೈಯೋ ಅಲಂಕಾರಗಳು, ಗಮನ ಸೆಳೆಯೋ ಕಾರಂಜಿಗಳು, ಬಣ್ಣಬಣ್ಣದ ಭಿತ್ತಿಚಿತ್ರಗಳು, ಎಲ್ಲೆಲ್ಲೂ ಹೂವುಗಳು… ಆಹಾ ದೆಹಲಿಯೆ …​ನೋಡಲು ಎರಡು ಕಣ್ಣು ಸಾಲದು

ಇಂಥ ದೆಹಲಿಯಲ್ಲಿ ಕೊಳೆಗೇರಿಗಳಿವೆ, ಹೊಟ್ಟೆಗಿಲ್ಲದೆ ನರಳುತ್ತಿರುವವರಿದ್ದಾರೆ, ನಿರಾಶ್ರಿತರಿದ್ದಾರೆ, ಭಿಕ್ಷುಕರಿದ್ದಾರೆ ಎಂದು ಯಾರಾದರೂ ಹೇಳಿದರೆ ಏನು ಮಾತು ಅದು? ಅವರಿಗೇನಾದರೂ ತಲೆಗಿಲೆ ಕೆಟ್ಟಿದೆಯೆ?. ಯಾಕೆಂದರೆ, ದೆಹಲಿಯಲ್ಲಿ ಕೊಳೆಗೇರಿಗಳಿಲ್ಲ, ನಿರಾಶ್ರಿತರು ನಿರ್ವಸಿತರು ಇಲ್ಲವೇ ಇಲ್ಲ.​ ದೆಹಲಿ ಮಾತ್ರವಲ್ಲ ಇಡೀ ಭಾರತದಲ್ಲೇ ಇಲ್ಲ.

ದೆಹಲಿಯೆಂದರೆ ಹಸಿ​ರು ಪರದೆಯಿಂದ ಎರಡೂ ಬದಿಗಳನ್ನು ಮುಚ್ಚಲಾದ ಮಾರ್ಗಗಳು, ದೆಹಲಿಯೆಂದರೆ ಪ್ರಗತಿ ಮೈದಾನದ ಭಾರತ್ ಮಂಟಪ್, ದೆಹಲಿಯೆಂದರೆ ಈಗ ಒಂದು ಭರ್ಜರಿ ರೋಡ್ ಶೊಗೆ ರೆಡಿಯಾಗಿರೋ ಪೂರ್ತಿ ಸ್ಕ್ರಿಪ್ಟೆಡ್ ವೇದಿಕೆ. ಜಿ20ಗಾಗಿ ದೆಹಲಿಯನ್ನು ಅಲಂಕರಿಸೋ ಕೆಲಸ ಎಷ್ಟು ಕರಾರುವಾಕ್ಕಾಗಿ ನಡೆದಿದೆಯೆಂದರೆ, ದುರ್ಬಲರನ್ನು, ನಿರ್ವಸಿತರನ್ನು ಯಾವ ಮುಲಾಜಿಲ್ಲದೆ ಬದಿಗೆ ಅಟ್ಟಲಾಗಿದೆ.​ ದೇಶದ ಪ್ರತಿಷ್ಠೆ ಹೆಚ್ಚಿಸಲು ಇಷ್ಟೂ ಮಾಡದಿದ್ರೆ ಹೇಗೆ ? ​

ಕೊಳೆಗೇರಿಗಳು ಕಾಣದಿರುವಂತೆ ಹಸಿರು ಹೊದಿಕೆ ಹಾಕಿ ಮುಚ್ಚಲಾಗಿದೆ. ​ದೆಹಲಿಯ ಯಮುನಾ ಪುಷ್ಟಾ ಪ್ರದೇಶದಲ್ಲಿನ ನಿರಾಶ್ರಿತರ ಶೆಲ್ಟರ್ ಕೆಡವಲಾಗಿರುವುದು, ಯಮುನಾ ಪ್ರವಾಹ ಪ್ರದೇಶದ ಬಳಿ ನಿರಾಶ್ರಿತರನ್ನೆಲ್ಲ ಹೊರಗಟ್ಟಿ ಅವರು ಬೀದಿಪಾಲಾಗುವಂತೆ ಮಾಡಿರುವುದು ಇದಕ್ಕೆಲ್ಲ ಸಾಧಾರಣ ಅಳತೆಯ ಎದೆ ಸಾಲಬಹುದೆ​ ?

ಜಿ20 ಗಣ್ಯರನ್ನು ಕರೆತರಲಾಗುವ ಸ್ಥಳದಲ್ಲಿಯೂ ನಿರಾಶ್ರಿತರನ್ನು ಹೊರಗೆ ತಳ್ಳಿ, ಅಲ್ಲೊಂದು ಉದ್ಯಾನವನ ನಿರ್ಮಿಸಲಾಯಿತು ಎಂದರೆ ಅದೇನು ಕಡೆಗಣಿಸುವಂಥ ಕೆಲಸವೆ?. ಪ್ರವಾಹ ಸಂತ್ರಸ್ತರನ್ನು ಹೊರಗಟ್ಟುವಾಗ, ಅವರ ಅಂಗವೈಕಲ್ಯವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಬೀದಿಗೆ ತಳ್ಳಿದವರ ನಿರ್ದಾಕ್ಷಿಣ್ಯ ಮತ್ತು ಕ್ರೌರ್ಯ ಗ್ರೇಟ್ ಅಲ್ಲವೆ​ ?

ಎಲ್ಲ ಖಾಲಿ ಮಾಡಿಕೊಂಡು ಹೊರಹೋಗಿ ಎಂದು ಸೂಚಿಸಿ, ಆ ಪಾಪದ ಜೀವಗಳು ತಮ್ಮಲ್ಲಿರುವ ಚೂರು ಪಾರು ಸರಕನ್ನು ಮತ್ತೆಲ್ಲೋ ಸಾಗಿಸಲೆಂದು ಕಟ್ಟಿಕೊಳ್ಳುವಷ್ಟರಲ್ಲೇ ಬುಲ್ಡೋಜರ್ ತಂದು ಶೆಲ್ಟರ್ ಒಡೆಯಲು ಶುರು ಮಾಡಿದ ಆ ಸ್ಪೀಡ್ ಇದೆಯಲ್ಲ, ಅದನ್ನು ಮೆಚ್ಚಲೇಬೇಕಲ್ಲವೆ?. ರಾಜಧಾನಿಯ ಬ್ರಿಡ್ಜ್ಗಳು, ಫ್ಲೈಓವರ್ಗಳ ಕೆಳಗೆ ಹೇಗೋ ಬದುಕಿಕೊಂಡಿದ್ದ ನಿರ್ವಸಿತರನ್ನು ಅಲ್ಲಿಂದ ಅಟ್ಟಿ, ಜಿ20 ಗಣ್ಯರ ಸ್ವಾಗತಕ್ಕೆ ಅದ್ಧೂರಿಯಾಗಿ ತಯಾರಾದದ್ದಕ್ಕೆ ಭೇಷ್ ಎನ್ನಲೇಬೇಕಲ್ಲವೆ?

ಜಿ20ಗೆ ದೆಹಲಿ ಹೀಗೆ ರೆಡಿಯಾಗುತ್ತಿದ್ದರೆ, ಅದಕ್ಕಾಗಿ ಹೊರಹಾಕಲ್ಪಟ್ಟ ಬಡಪಾಯಿ ಮಂದಿಯದ್ದು ದಿಕ್ಕೇ ತೋಚದ ಸ್ಥಿತಿ. ಕನಿಷ್ಠ ಹದಿನೈದಿಪ್ಪತ್ತು ದಿನ ಅವರಾರೂ ಅಲ್ಲೆಲ್ಲೂ ಸುಳಿಯುವ ಹಾಗೆಯೇ ಇಲ್ಲ. ಲಜ್ಪತ್ ನಗರದ ಮೂಲ್ಚಂದ್ ಫ್ಲೈಓವರ್ ಅಡಿಯಲ್ಲಿ ಕರ್ಚೀಫ್ ಮಾರಿಕೊಂಡಿದ್ದ ರಾಜಸ್ತಾನದ ಹುಡುಗರಿಗೆ ಇರಲು ಮತ್ತೆಲ್ಲೂ ನೆಲೆಯಿಲ್ಲದೆ ಹಳ್ಳಿಗೇ ಹೋಗಬೇಕಾದ ಸ್ಥಿತಿ.​ ಆದರೆ ದೇಶಕ್ಕಾಗಿ, ಮೋದೀಜಿಗಾಗಿ ಅಷ್ಟೂ ತ್ಯಾಗ ಮಾಡದಿದ್ದರೆ ಹೇಗೆ ?

ಭಿಕ್ಷೆಯಿಂದ ಸಿಗುವುದರಲ್ಲಿಯೇ ಬದುಕಬೇಕಿರುವ ಅಸಹಾಯಕರದ್ದೂ ಅದೇ ಕಥೆ. ಊರಿನ ಕಡೆ ಮರಳದೆ ಬೇರೆ ದಿಕ್ಕಿಲ್ಲ.​ ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದವರೂ ಈಗ ಸರ್ಕಾರದ ಹಸಿರು ಹೊದಿಕೆಯ ಹಿಂದೆ ಕಾಣದಾಗಿದ್ದಾರೆ. ಭಿಕ್ಷುಕರು ಬಿಡಿ, ಪ್ರಗತಿ ಮೈದಾನ್ ನಲ್ಲಿ ಜಿ 20 ಯ ಕೆಲಸ ಮಾಡುತ್ತಿರುವವರದ್ದೇ ಮನೆ ಅಕ್ರಮ ಎಂದು ದಿಲ್ಲಿಯಲ್ಲಿ ಸ್ಥಳಾಂತರ ಮಾಡಲಾಗಿದೆ ಎಂಬ ವರದಿಯಿದೆ.

ಆದರೆ ಜಿ 20 ಅಂದ ಮೇಲೆ ಇದೆಲ್ಲಾ ಸಾಮಾನ್ಯ ಅಲ್ವಾ ?. ಹೀಗೆ ನಿರ್ಗತಿಕರನ್ನು, ಅಸಹಾಯಕರನ್ನು, ಬಡವರನ್ನು ದೂರ ಅಟ್ಟುವ ಅಥವಾ ಅವರನ್ನು ಹಸಿರು ಹೊದಿಕೆಯ ಹಿಂದೆ ಮರೆಮಾಚುವ ಈ ಸರ್ಕಾರ ಅವರ ಜೀವನೋಪಾಯವನ್ನೂ ಕಸಿದಿದೆಯಲ್ಲವೆ?​ ಆದರೆ ಏನು ಮಾಡೋದು ?

ವಿದೇಶಗಳ ನಾಯಕರಿಗೆ ಭಾರತದಲ್ಲಿರುವ ಬಡತನ, ಹಸಿವು, ಕೊಳಗೇರಿ ಇದ್ಯಾವುದೂ ಗೊತ್ತಿಲ್ಲ. ಅದೆಲ್ಲ ಕಂಡು ಬಿಟ್ಟರೆ ಅದೆಷ್ಟು ಗಲೀಜು ? ವಿದೇಶಗಳ ಪ್ರಧಾನಿಗಳು,ಅಧ್ಯಕ್ಷರಿಗೆ ಮಣಿಪುರದಲ್ಲಿ ಮೂರ್ನಾಲ್ಕು ತಿಂಗಳುಗಳ ಕಾಲ ಹಿಂಸೆ ತಾಂಡವವಾಡಿದ್ದು ನೂರಾರು ಜನ ಜೀವ ಕಳಕೊಂಡಿದ್ದು, ಸಾವಿರಾರು ಮಂದಿ ಬೀದಿಪಾಲಾಗಿದ್ದು ಯಾವುದೂ ಗೊತ್ತಿಲ್ಲ.

​ದೇಶದ 80 ಕೋಟಿಗೂ ಹೆಚ್ಚು ಜನ ಬಡವರು, ಅವರಿಗೆ ಹೊಟ್ಟೆ ತುಂಬಿಸಲು ಸರಕಾರ ಪಡಿತರ ಕೊಡುತ್ತೆ ಅನ್ನೋದೂ ಜೋ ಬೈಡನ್ ಗೆ ಗೊತ್ತಿಲ್ಲ. ಭಾರತದಲ್ಲಿ ಇತ್ತೀಚಿನ ದಶಕಗಳಲ್ಲೇ ಅತಿ ಹೆಚ್ಚು ಪ್ರಮಾಣದ ನಿರುದ್ಯೋಗ ಕಾಡುತ್ತಿದೆ. ಇಲ್ಲಿನ ಯುವಜನ ಉದ್ಯೋಗ ಸಿಗದೇ ಕಂಗಾಲಾಗಿದ್ದಾರೆ. ವಾಟ್ಸ್ ಆಪ್ ಗಳಲ್ಲಿ ಬಿಝಿಯಾಗಿದ್ದಾರೆ ಎಂಬುದು ಯಾವುದೇ ವಿದೇಶಿ ಗಣ್ಯರಿಗೆ ಗೊತ್ತಿಲ್ಲ.

ದೇಶ ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನ, ಬಂಗ್ಲಾಕ್ಕಿಂತಲೂ ಶೋಚನೀಯ ಸ್ಥಿತಿಗೆ ತಲುಪಿದೆ, ಇಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಜಗತ್ತಿನಲ್ಲೇ ಅತಿಹೆಚ್ಚು ಇದೆ ಎಂಬುದು ಹೊರದೇಶಗಳಿಗೆ ಗೊತ್ತೇ ಇಲ್ಲ.

ದೇಶ ಪತ್ರಿಕಾ ಸ್ವಾತಂತ್ರ್ಯದಲ್ಲಿ 180 ದೇಶಗಳ ಸೂಚ್ಯಂಕದಲ್ಲಿ 161ನೇ ಸ್ಥಾನಕ್ಕೆ ಇಳಿದಿದೆ ಎಂಬುದು ಜಿ 20 ದೇಶಗಳ ನಾಯಕರಿಗೆ ತಿಳಿದೇ ಇಲ್ಲ. ಇಲ್ಲಿ ಮಾತಾಡಿದರೆ ಸಾಕು ಹಕ್ಕು ಕಾರ್ಯಕರ್ತರು ಹಾಗು ವಿಪಕ್ಷ ನಾಯಕರ ಆಮೇಲೆ ಇಡಿ, ಐಟಿ, ಎನ್ ಐ ಎ ರೇಡು ನಡೆಯುತ್ತೆ. ಬಂಧನ ಆಗುತ್ತೆ. ಅದೇ ಹತ್ಯಾಕಾಂಡಕ್ಕೆ ಕರೆ ಕೊಡುವವರ ಮೇಲೆ ಯಾವುದೇ ಕ್ರಮ ಆಗೋದಿಲ್ಲ ಅನ್ನೋದು ಯಾವುದಾದರೂ ವಿದೇಶಿ ನಾಯಕರಿಗೆ ಗೊತ್ತಿದೆಯೇ ? ಛೇ ಇಲ್ಲಪ್ಪ...

ಎಲ್ಲ ವಿದೇಶಿ ನಾಯಕರಿಗೆ ಗೊತ್ತಿರುವುದು ಶ್ವೇತಭವನದಲ್ಲಿ ನಿಂತು ಮೋದೀಜಿ 12 ಸಲ ಡೆಮಾಕ್ರಸಿ ಅಂತ ಹೇಳಿರೋದು ಮಾತ್ರ. ಹಾಗಾಗಿ ನಮ್ಮ ದೇಶದ ಬಗ್ಗೆ ಏನೇನೂ ಗೊತ್ತಿರದ ವಿದೇಶಿ ಗಣ್ಯರು ದಿಲ್ಲಿಗೆ ಬರುವಾಗ ಅದ್ಯಾವುದೂ ಅವರ ಕಣ್ಣಿಗೆ ಕಾಣದಂತೆ ಮಾಡುವುದು ಬಹಳ ಮುಖ್ಯ. ಮೋದಿ ಸರಕಾರ ಅದನ್ನೇ ಮಾಡಿದೆ. ಇಷ್ಟನ್ನು ಮಾಡಲೇಬೇಕು. ಏನಂತೀರಿ ?

ಈ ಸಂದರ್ಭದಲ್ಲಿ ಜಿ 20 ಅಧ್ಯಕ್ಷತೆ ಅನ್ನೋದು ಅದರಲ್ಲಿರುವ ಎಲ್ಲ ದೇಶಗಳಿಗೂ ಸರದಿಯಲ್ಲಿ ಸಿಗುವ ಸ್ಥಾನ. ಹೋದ ವರ್ಷ ಇಂಡೊನೇಷ್ಯಾಕ್ಕೆ ಸಿಕ್ಕಿತ್ತು. ಈ ವರ್ಷ ಭಾರತಕ್ಕೆ ಸಿಕ್ಕಿದೆ. ಮುಂದಿನ ವರ್ಷ ಇನ್ನೊಂದು ದೇಶಕ್ಕೆ ಸಿಗುತ್ತೆ. ಅದಕ್ಕೆ ಇಷ್ಟೆಲ್ಲಾ ವೈಭವದ ತಯಾರಿ, ಅಬ್ಬರದ ಪ್ರಚಾರವನ್ನು ಈ ಹಿಂದೆ ಯಾವುದೇ ದೇಶ ಮಾಡಿರಲಿಲ್ಲ. ಜಿ 20ಗೆ ಇಷ್ಟೆಲ್ಲಾ ಕೋಟಿ ಕೋಟಿ ಖರ್ಚು ಮಾಡಿ ಏನಾಗುತ್ತಿದೆ ? ಹೋದ ವರ್ಷದ ಬಾಲಿ ಶೃಂಗ ಸಭೆಯಲ್ಲೂ ಅಂತಹ ವಿಶೇಷ ಫಲಿತಾಂಶ ಏನೂ ಬರ್ಲಿಲ್ಲ. ಈ ವರ್ಷವೂ ಶೃಂಗ ಸಭೆಗೆ ಮೊದಲು ಹತ್ತು ಹಲವು ಸಭೆಗಳು ನಡೆದಿವೆ. ಅದರಲ್ಲಿ ಔಟ್ ಕಮ್ ವಿಶೇಷ ಏನೂ ಇಲ್ಲ ಎಂದೆಲ್ಲ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ನಂತಹ ಮಾಧ್ಯಮಗಳು ವರದಿ ಮಾಡುತ್ತಿವೆ. ಅವುಗಳಿಗೆ ಮೋದೀಜಿ ಅಂದರೆ ಹೊಟ್ಟೆಕಿಚ್ಚು. ಹಾಗಾಗಿ ಅವುಗಳನ್ನು ಬಿಟ್ಟು ಬಿಡಿ. ನಾವು ದಿಲ್ಲಿಯ ಕಾರಂಜಿಗಳ ಫೋಟೋ ನೋಡೋಣ . ಖುಷಿ ಪಡೋಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News