×
Ad

ಗಾಂಧೀಜಿಯವರು ಆರೆಸ್ಸೆಸ್ ‘ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆ’ ಎಂದಿದ್ದರು : ಕಾಂಗ್ರೆಸ್

Update: 2025-10-02 16:50 IST

Photo : X/@JitendraSAlwar

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತನ್ನ ಶತಮಾನೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಮಹಾತ್ಮಾ ಗಾಂಧಿಜಿ ಸಂಘವನ್ನು “ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆ” ಎಂದು ಹೇಳಿದ್ದರು ಕಾಂಗ್ರೆಸ್ ಗುರುವಾರ ಉಲ್ಲೇಖಿಸಿದೆ.

ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಗಾಂಧಿಯವರ ಆಪ್ತ ಸಹಾಯಕ ಹಾಗೂ ಕಾರ್ಯದರ್ಶಿಯಾಗಿದ್ದ ಪ್ಯಾರೆಲಾಲ್ ಅವರ ಕೃತಿಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. 1956ರಲ್ಲಿ ನವಜೀವನ್ ಪ್ರಕಾಶನದಿಂದ ಪ್ರಕಟವಾದ “ಮಹಾತ್ಮ ಗಾಂಧಿ: ದಿ ಲಾಸ್ಟ್ ಫೇಸ್” ಕೃತಿಯ ಎರಡನೇ ಸಂಪುಟದಲ್ಲಿ, 1947ರ ಸೆಪ್ಟೆಂಬರ್ 12ರಂದು ಗಾಂಧಿಯವರು ಸಹೋದ್ಯೋಗಿಯೊಂದಿಗಿನ ಸಂಭಾಷಣೆಯಲ್ಲಿ ಆರೆಸ್ಸೆಸ್ ಕುರಿತು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ದಾಖಲಾಗಿದೆ ಎಂದು ಅವರು ಹೇಳಿದರು.

ಆ ಮಾತುಕತೆ ನಡೆದ ಕೇವಲ ಐದು ತಿಂಗಳ ನಂತರ, ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್ ನಿಷೇಧಿಸಿದ್ದರು. ಈ ಕುರಿತು ಪುಸ್ತಕದ ಪುಟದ ಸ್ಕ್ರೀನ್‌ಶಾಟ್‌ ರಮೇಶ್ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ, 1948ರ ಜುಲೈ 18ರಂದು ಪಟೇಲ್ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಬರೆದಿದ್ದ ಪತ್ರದ ಭಾಗವನ್ನೂ ರಮೇಶ್ ಪ್ರದರ್ಶಸಿದರು. ಆ ಪತ್ರದಲ್ಲಿ, “ಆರೆಸ್ಸೆಸ್ ಮತ್ತು ಹಿಂದೂ ಮಹಾಸಭೆಯ ಚಟುವಟಿಕೆಗಳಿಂದಲೇ ಗಾಂಧಿಜಿಯವರ ಹತ್ಯೆಯಂತಹ ಭೀಕರ ದುರಂತಕ್ಕೆ ಕಾರಣವಾದ ವಾತಾವರಣ ನಿರ್ಮಾಣವಾಯಿತು. ಸರಕಾರ ಮತ್ತು ರಾಷ್ಟ್ರದ ಅಸ್ತಿತ್ವಕ್ಕೂ ಆರೆಸ್ಸೆಸ್ ಚಟುವಟಿಕೆಗಳು ಸ್ಪಷ್ಟ ಅಪಾಯ ಒಡ್ಡುತ್ತಿವೆ” ಎಂದು ಪಟೇಲ್ ಉಲ್ಲೇಖಿಸಿದ್ದರು.

ಅಲ್ಲದೇ, 1948ರ ಡಿಸೆಂಬರ್ 19ರಂದು ಜೈಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಟೇಲ್ ಸಂಘದ ವಿರುದ್ಧ ತೀವ್ರವಾಗಿ ಟೀಕಿಸಿದ್ದರು ಎಂಬುದನ್ನೂ ರಮೇಶ್ ನೆನಪಿಸಿದರು.

ಇದೇ ಸಂದರ್ಭದಲ್ಲಿ, ಬುಧವಾರ ನಡೆದ ಆರೆಸ್ಸೆಸ್‌ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಘದ ಮೇಲೆ ನಡೆದ ಅನೇಕ ದಾಳಿಗಳ ಹೊರತಾಗಿಯೂ ಅದು ಯಾವುದೇ “ರಾಷ್ಟ್ರಪ್ರಥಮ” ತತ್ವದ ಆಧಾರದ ಮೇಲೆ ದೇಶಸೇವೆಯನ್ನು ಮುಂದುವರಿಸಿದೆಯೆಂದು ಪ್ರಶಂಸಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News