×
Ad

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರದ ಅರ್ಜಿ: ಸುಪ್ರೀಂ ಕೋರ್ಟಿನಿಂದ ಆರೋಪಿಗೆ ನೋಟಿಸ್‌

Update: 2024-03-01 15:37 IST

ಗೌರಿ ಲಂಕೇಶ್‌ 

ಹೊಸದಿಲ್ಲಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿ ಮೋಹನ್‌ ನಾಯಕ್‌ ಎಂಬಾತನಿಗೆ ಹೈಕೋರ್ಟ್‌ ಜಾಮೀನು ನೀಡಿರುವುದರ ಹಿಂದಿನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಆರೋಪಿಗೆ ನೋಟಿಸ್‌ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸತೀಶ್‌ ಚಂದ್ರ ಶರ್ಮ ಅವರ ಪೀಠವು ಆರೋಪಿಯಿಂದ ಪ್ರತಿಕ್ರಿಯೆಯನ್ನು ಕೇಳಿದೆ.

ಈ ಹಿಂದೆ ಜನವರಿಯಲ್ಲಿ ಗೌರಿ ಲಂಕೇಶ್‌ ಅವರ ಸೋದರಿ ಕವಿತಾ ಲಂಕೇಶ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗಲೂ ನ್ಯಾಯಾಲಯ ಇದೇ ರೀತಿಯ ನೋಟಿಸ್‌ ಅನ್ನು ಆರೋಪಿಗೆ ನೀಡಿತ್ತು.

ಎರಡೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಎಪ್ರಿಲ್ 9ರಂದು ವಿಚಾರಣೆ ನಡೆಸಲು ನ್ಯಾಯಾಲಯ ಆದೇಶಿಸಿದೆ.

ಕಳೆದ ವರ್ಷದ ಡಿಸೆಂಬರ್‌ 7ರಂದು ಕರ್ನಾಟಕ ಹೈಕೋರ್ಟ್‌ ಆರೋಪಿಗೆ ಜಾಮೀನು ನೀಡಿತ್ತು. ಆತ ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಹಾಗೂ ವಿಚಾರಣೆಗೆ ಆಗುತ್ತಿರುವ ವಿಳಂಬದ ಬಗ್ಗೆ ಪ್ರಸ್ತಾಪಿಸಿ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು.

ಗೌರಿ ಲಂಕೇಶ್‌ ಅವರನ್ನು ಸೆಪ್ಟೆಂಬರ್‌ 5, 2017ರಂದು ಬೆಂಗಳೂರಿನ ಅವರ ನಿವಾಸದೆದುರು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News