×
Ad

ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ಹೇಳಿದ ಬಾಲಕಿಯನ್ನು ಥಳಿಸಿ, ಮೇಲ್ಛಾವಣಿಯಿಂದ ಕೆಳಕ್ಕೆ ಎಸೆದ ಪೊಲೀಸ್ ದಂಪತಿ

Update: 2025-06-12 10:32 IST

PC | ndtv

ಲಕ್ನೋ: ಪೊಲೀಸ್ ಕಾನ್‍ಸ್ಟೇಬಲ್ ಹಲವು ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಅಪ್ರಾಪ್ತ ವಯಸ್ಸಿನ ಯುವತಿ, ಪೊಲೀಸ್ ಪತ್ನಿಯ ಬಳಿ ಅಳಲು ತೋಡಿಕೊಂಡ ಕಾರಣಕ್ಕೆ ಕೋಪಗೊಂಡ ಪೊಲೀಸ್ ದಂಪತಿ ಆಕೆಯನ್ನು ಅಮಾನುಷವಾಗಿ ಥಳಿಸಿ, ಛಾವಣಿಯಿಂದ ಕೆಳಕ್ಕೆ ಎಸೆದ ಘಟನೆ ಬೆಳಕಿಗೆ ಬಂದಿದೆ.

ಹದಿನಾರು ವರ್ಷ ವಯಸ್ಸಿನ ಯುವತಿಗೆ ಗಾಯಗಳಾಗಿದ್ದು, ಕಾಲು ಮುರಿದಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ, ದಂಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವತಿಯ ತಂದೆಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ನೋದ ಲಾಲ್‍ಪುರ ಪ್ರದೇಶದಲ್ಲಿ ಕುಟುಂಬದ ಜತೆ ವಾಸವಿದ್ದ ಯುವತಿಯ ಮನೆಯ ಎದುರೇ ಅದೇ ಕಟ್ಟಡದಲ್ಲಿ ಕಾನ್‍ಸ್ಟೇಬಲ್ ದಂಪತಿ ವಾಸವಿದ್ದರು. ಎರಡೂ ಕುಟುಂಬಗಳು ಒಂದೇ ಶೌಚಾಲಯ ಬಳಸಬೇಕಿತ್ತು. ಪೊಲೀಸ್ ಪೇದೆ ತುರ್ತು ಕರೆ 112 ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈತ ಅವಕಾಶ ಸಿಕ್ಕಿದಾಗಲೆಲ್ಲ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆಪಾದಿಸಲಾಗಿದೆ. ಎರಡು ತಿಂಗಳಿಗೂ ಅಧಿಕ ಕಾಲದಿಂದ ಈ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.

ಪೊಲೀಸ್ ಪೇದೆ ಹಲವು ಬಾರಿ ನನ್ನ ದಾರಿಯನ್ನು ಅಡ್ಡಗಟ್ಟಿ, ಕೈ ಹಿಡಿದು, ಹೊಲಸು ಮಾತನಾಡುತ್ತಿದ್ದ ಎಂದು ಸಂತ್ರಸ್ತೆ ವಿವರಿಸಿದ್ದಾಳೆ. ಪೊಲೀಸ್ ಕಿರುಕುಳ ಸಹಿಸಲಾಗದೇ, ಪಕ್ಕದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆತನ ಪತ್ನಿಯ ಬಳಿ ಸೋಮವಾರ ಈ ವಿಷಯನ್ನು ಹೇಳಿಕೊಂಡಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಈ ವಿಷಯಕ್ಕೆ ಪತಿ ಹಾಗೂ ಪತ್ನಿಯ ನಡುವೆ ಜಗಳವಾಗಿದೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಹೊರಬಂದ ಪತ್ನಿ, ಎರಡು ಮಹಡಿಯ ಕಟ್ಟಡದಲ್ಲಿ ವಾಸವಿದ್ದ ಯುವತಿಗೆ ಸಾಕ್ಷಿ ಒದಗಿಸುವಂತೆ ಸೂಚಿಸಿದ್ದಾಳೆ.

ಈ ಸಂದರ್ಭದಲ್ಲಿ ದಂಪತಿ ಸೇರಿಕೊಂಡು ಯುವತಿಯ ಮೇಲೆ ಹಲ್ಲೆ ನಡೆಸಿ ಛಾವಣಿಯಿಂದ ಕೆಳಕ್ಕೆ ಎಸೆದರು ಎಂದು ದೂರಲಾಗಿದೆ. ಮಗಳನ್ನು ಎಸೆದದ್ದನ್ನು ನೋಡಿದ ತಂದೆ, ಪೊಲೀಸ್ ದಂಪತಿಯ ಜತೆ ಜಗಳಕ್ಕೆ ಹೋದಾಗ, ಮಹಿಳೆಯ ಸಹೋದರ ಹಲ್ಲೆ ಮಾಡಿದ ಎಂದು ಆಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News