×
Ad

ಮಹಾರಾಷ್ಟ್ರ | ಶಾಲಾ ಶೌಚಾಲಯದಲ್ಲಿ ರಕ್ತದ ಕಲೆ ಪತ್ತೆ ಬಳಿಕ ಬಾಲಕಿಯರನ್ನು ವಿವಸ್ತ್ರಗೊಳಿಸಿ ಪರಿಶೀಲನೆ : ಪ್ರಾಂಶುಪಾಲ ಸಹಿತ 8 ಮಂದಿ ವಿರುದ್ಧ ಪ್ರಕರಣ ದಾಖಲು

Update: 2025-07-10 11:43 IST

ಸಾಂದರ್ಭಿಕ ಚಿತ್ರ (PTI)

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 5 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರನ್ನು ಋತುಮತಿಯಾಗಿದ್ದಾರೆಯೇ ಎಂದು ಪರೀಕ್ಷಿಸಲು ವಿವಸ್ತ್ರಗೊಳಿಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಶಾಲಾ ಪ್ರಾಂಶುಪಾಲ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಹಾಪುರ ಪ್ರದೇಶದ ಆರ್ ಎಸ್ ದಮಾನಿ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ನಂತರ 5 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಿ ಮುಟ್ಟಾಗುತ್ತಿದೆಯೇ ಎಂದು ಪರಿಶೀಲಿಸಿರುವ ಆರೋಪ ಕೇಳಿ ಬಂದಿದೆ.

ವಿದ್ಯಾರ್ಥಿನಿಯೋರ್ವರ ಪೋಷಕರು ನೀಡಿದ ದೂರಿನ ಪ್ರಕಾರ, 5 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರನ್ನು ಶಾಲೆಯ ಸಭಾಂಗಣಕ್ಕೆ ಕರೆಸಿ ಶೌಚಾಲಯದ ನೆಲದಲ್ಲಿನ ರಕ್ತದ ಕಲೆಗಳ ಫೋಟೋಗಳನ್ನು ತೋರಿಸಲಾಯಿತು. ವಿದ್ಯಾರ್ಥಿನಿಯರಲ್ಲಿ ಯಾರಿಗಾದರೂ ಮುಟ್ಟಾಗುತ್ತಿದೆಯಾ ಎಂದು ಪ್ರಶ್ನಿಸಲಾಯಿತು. ಬಳಿಕ ಶಾಲೆಯ ಮಹಿಳಾ ಸಹಾಯಕಿ ಒಬ್ಬೊಬ್ಬರನ್ನಾಗಿ ಶೌಚಾಲಯಕ್ಕೆ ಕರೆದೊಯ್ದು ಅವರ ಒಳಉಡುಪುಗಳನ್ನು ಪರಿಶೀಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಪೋಕ್ಸೊ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಾಂಶುಪಾಲರು, ನಾಲ್ವರು ಶಿಕ್ಷಕರು ಸೇರಿದಂತೆ ಎಂಟು ಮಂದಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಥಾಣೆ ಗ್ರಾಮೀಣ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಝಲ್ಟೆ, ಬಾಲಕಿಯರ ಒಳಉಡುಪುಗಳನ್ನು ತಪಾಸಣೆ ನಡೆಸಿ ಅವಮಾನಿಸಿರುವ ಬಗ್ಗೆ ತಿಳಿದ ಪೋಷಕರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಇಡೀ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News