×
Ad

ಗೋವಾ ಸಿಎಂ ಮಧ್ಯಪ್ರವೇಶ: ಆರೋಗ್ಯ ಸಚಿವರ ವಿರುದ್ಧದ ಪ್ರತಿಭಟನೆಯನ್ನು ಹಿಂಪಡೆದ ವೈದ್ಯರು

Update: 2025-06-12 19:24 IST

PC : PTI 

ಪಣಜಿ: ಮಂಗಳವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಧ್ಯಪ್ರವೇಶಿಸಿದ್ದರಿಂದಾಗಿ, ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಿರುದ್ಧ ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಹಿಂಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಪಣಜಿ ಬಳಿಯಿರುವ ಸರಕಾರಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತೆರಳಿದ್ದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಪ್ರತಿಭಟನಾನಿರತ ವೈದ್ಯರಿಗೆ ಭರವಸೆ ನೀಡಿದ್ದರು.

ಅತ್ಯಾಧುನಿಕ ಸೌಲಭ್ಯ ಹೊಂದಿರುವ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಇತ್ತೀಚೆಗೆ ಅಚ್ಚರಿಯ ಭೇಟಿ ನೀಡಿದ್ದ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ರೋಗಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರುದ್ರೇಶ್ ಕುಟ್ಟಿಕಾರ್‌ರನ್ನು ತರಾಟೆಗೆ ತೆಗೆದುಕೊಂಡು, ಅವರ ಅಮಾನತಿಗೆ ಅದೇಶಿಸಿದ್ದರು. ಅವರ ಈ ವರ್ತನೆಯ ವಿರುದ್ಧ ವೈದ್ಯಕೀಯ ಸಿಬ್ಬಂದಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಮುಖ್ಯ ವೈದ್ಯಾಧಿಕಾರಿ ಡಾ. ರುದ್ರೇಶ್ ಕುಟ್ಟಿಕಾರ್‌ರ ಅಮಾನತು ಆದೇಶವನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಿಂಪಡೆದಿದ್ದರು.

ನಂತರ, ಸೋಮವಾರ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸಾಮಾಜಿಕ ಮಾಧ್ಯಮದ ಮೂಲಕ ವೈದ್ಯರ ಕ್ಷಮೆಯಾಚಿಸಿದ್ದರು. ಆದರೆ ಸಚಿವ ವಿಶ್ವಜಿತ್ ರಾಣೆ ಡಾ‌. ರುದ್ರೇಶ್ ಕುಟ್ಟಿಕಾರ್ ಬಳಿ ಅವರು ವೈಯಕ್ತಿಕವಾಗಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಹೀಗಾಗಿ, ಮಂಗಳವಾರದಂದು ಸರಕಾರಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತೆರಳಿದ್ದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಸ್ಥಾನಿಕ ವೈದ್ಯಾಧಿಕಾರಿಗಳ ಒಕ್ಕೂಟ(GARD)ದ ಪ್ರತಿನಿಧಿಗಳು, ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಶಿವಾನಂದ್ ಬಾಂದೇಕರ್ ಹಾಗೂ ಇನ್ನಿತರ ಅಧಿಕಾರಿಗಳನ್ನು ಭೇಟಿಯಾಗಿ, ಅವರೊಂದಿಗೆ ಮಾತುಕತೆ ನಡೆಸಿದ್ದರು.

ಇದರ ಬೆನ್ನಿಗೇ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಿರುದ್ಧ ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಪ್ರತಿಭಟನಾನಿರತ ವೈದ್ಯರು ಹಿಂಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News