×
Ad

ಬುಡಕಟ್ಟು ಕಲ್ಯಾಣ ಇಲಾಖೆಯ ಭ್ರಷ್ಟಾಚಾರ ಬಯಲಿಗೆಳೆದ ಗೋವಾ ಸಚಿವ ಗಾವುಡೆ ವಜಾ

Update: 2025-06-19 21:01 IST

ಗೋವಾ ಸಚಿವ ಗಾವುಡೆ ವಜಾ | PC : NDTV 

ಪಣಜಿ: ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪಗಳನ್ನು ಮಾಡಿದ್ದ ಗೋವಾ ಸಚಿವ ಗೋವಿಂದ ಗಾವುಡೆ ಅವರನ್ನು ಬುಧವಾರ ಸಂಪುಟದಿಂದ ವಜಾಗೊಳಿಸಲಾಗಿದೆ.

ಬಿಜೆಪಿ ನೇತೃತ್ವದ ಗೋವಾ ಸರಕಾರದಲ್ಲಿ ಬುಡಕಟ್ಟು ಕಲ್ಯಾಣ ಖಾತೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೇ ನಿರ್ವಹಿಸುತ್ತಿದ್ದಾರೆ.

ಕಲೆ ಹಾಗೂ ಸಂಸ್ಕೃತಿ ಖಾತೆಯ ಸಚಿವರಾದ ಗಾವುಡೆ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಅವಿರೋಧವಾಗಿ ತೆಗೆದುಕೊಳ್ಳಲಾಗಿದೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ದಾಮು ನಾಯ್ಕ್ ಅವರು ತಿಳಿಸಿದ್ದಾರೆ.

ಸರಕಾರ, ಪಕ್ಷ ಹಾಗೂ ಪಕ್ಷದ ಕೇಂದ್ರೀಯ ನಾಯಕತ್ವದೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ಹೇಳಿದ ದಾಮು ನಾಯ್ಕ್ ಅವರು , ಪಕ್ಷದಲ್ಲಿ ಶಿಸ್ತು ಪಾಲನೆ ಅತ್ಯಂತ ಮುಖ್ಯವೆಂದು ಹೇಳಿದರು.

ಗೌಡೆ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಮಾಡಿರುವ ಶಿಫಾರಸನ್ನು ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ಅವರು ಅಂಗೀಕರಿಸಿದ್ದಾರೆ.

ಸಮಾಜದಲ್ಲಿ ಕಡೆಗಣಿಸಲ್ಪಟ್ಟ ವರ್ಗಗಳ ಪರ ನಿಂತಿದ್ದಕ್ಕಾಗಿ ಗೋವಾ ವಿಮೋಚನಾ ದಿನಾಚರಣೆಯ ಸಂದರ್ಭದಲ್ಲಿ ತನಗೆ ದೊರೆತ ಬಳುವಳಿ ಇದು ಎಂದು ವಜಾಗೊಂಡ ಸಚಿವ ಗಾವುಡೆ ಪ್ರತಿಕ್ರಿಯಿಸಿದ್ದಾರೆ. ಗೋವಾ ವಿಮೋಚನಾ ದಿನವನ್ನು ಜೂನ್ 18ರಂದು ಆಚರಿಸಲಾಗುತ್ತದೆ.

ಮೇ 26ರಂದು ನಡೆದ ರಾಜ್ಯ ಮಟ್ಟದ ಕಾರ್ಯಕ್ರಮವೊಂದರಲ್ಲಿ ಗಾವುಡೆ ಅವರು ಗೋವಾದ ಬುಡಕಟ್ಟು ಕಲ್ಯಾಣ ಇಲಾಖೆಯು ಅದಕ್ಷವೆಂದು ಟೀಕಿಸಿದ್ದರು ಹಾಗೂ ಕಡತಗಳಿಗೆ ಸಹಿಹಾಕುವುದಕ್ಕಾಗಿ ಆ ಇಲಾಖೆಯ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆಂದು ಆಪಾದಿಸಿದ್ದರು.

ಆದಿವಾಸಿ ಭವನದ ನಿರ್ಮಾಣವನ್ನು ಸ್ಥಗಿತಗೊಳಿಸಿರುವುದನ್ನು ಕೂಡಾ ಬುಡಕಟ್ಟು ನಾಯಕರಾದ ಗಾವುಡೆ ಪ್ರಶ್ನಿಸಿದ್ದರು. ಈ ಯೋಜನೆಗಾಗಿ ಆದಿವಾಸಿಗಳು ತಮ್ಮ ಜಮೀನನ್ನು ಕೂಡಾ ನೀಡಿದ್ದರು ಎಂದವರು ಹೇಳಿದ್ದರು.

ಗೋವಾ ಫಾರ್ವಡ್ ಪಾರ್ಟಿಯ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ವಿಜಯ್ ಸರ್ದೇಸಾಯಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು,, ‘‘ಈ ಮೊದಲು ಗಾವುಡೆ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದಾಗ ಅವರನ್ನು ವಜಾಗೊಳಿಸಿರಲಿಲ್ಲ. ಆದರೆ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದಾಗ ಸರಕಾರ ಅವರ ವಿರುದ್ಧ ಕ್ರಮ ಕೈಗೊಂಡಿದೆ’’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News