ಸಂವಿಧಾನ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತತೆ ಪದಗಳನ್ನು ತೆಗೆದು ಹಾಕಲು ಇದು ಸುವರ್ಣಾವಕಾಶ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Photo: PTI)
ಗುವಾಹಟಿ: ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತತೆ ಪದಗಳನ್ನು ತೆಗೆದು ಹಾಕಲು ಇದು ಸುವರ್ಣಾವಕಾಶ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಶನಿವಾರ ಹೇಳಿದ್ದಾರೆ. ಈ ಮೂಲಕ ಸಂವಿಧಾನ ಪೀಠಿಕೆಯಿಂದ ಸಮಾಜವಾದ ಹಾಗೂ ಜಾತ್ಯತೀತತೆ ಪದಗಳನ್ನು ತೆಗೆದು ಹಾಕಬೇಕು ಎಂದು ಈಗಾಗಲೇ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರಾದ ದತ್ತಾತ್ರೇಯ ಹೊಸಬಾಳೆ ಹಾಗೂ ಶಿವರಾಜ್ ಚೌಹಾಣ್ ಸಾಲಿಗೆ ಹಿಮಂತ ಬಿಸ್ವ ಶರ್ಮ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಅಸ್ಸಾಂನಲ್ಲಿ ನಡೆದ ‘ದಿ ಎಮರ್ಜೆನ್ಸಿ ಡೈರೀಸ್ – ಇಯರ್ಸ್ ದಟ್ ಪೋರ್ಜ್ಡ್ ಎ ಲೀಡರ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ, “ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ 42ನೇ ತಿದ್ದುಪಡಿ ಮೂಲಕ ಈ ಎರಡು ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸುವ ಮೂಲಕ ಸಂವಿಧಾನದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಲಾಯಿತು” ಎಂದು ಆರೋಪಿಸಿದರು.
ಈ ಪುಸ್ತಕ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಡೆದ ಅನುಭವಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
“ನಮ್ಮದು ಪ್ರಬುದ್ಧ ಪ್ರಜಾಪ್ರಭುತ್ವ. ನಮಗೆ ಬ್ರಿಟನ್ ಅಥವಾ ಅಮೆರಿಕ ಸಂವಿಧಾನಗಳಿಂದ ಜಾತ್ಯತೀತತೆ ಪದವನ್ನು ಕಲಿಯಬೇಕಾಗಿಲ್ಲ. ನಾವು ಜಾತ್ಯತೀತತೆಯ ಮೌಲ್ಯಗಳನ್ನು ಭಗವದ್ಗೀತೆಯಿಂದಲೇ ಪಡೆಯುತ್ತೇವೆ,” ಎಂದು ಅವರು ಹೇಳಿದರು.
“ಸಂವಿಧಾನದ 14ನೇ ವಿಧಿಯಲ್ಲಿ ಎಲ್ಲ ಪ್ರಜೆಗಳಿಗೆ ಸಮಾನತೆಯನ್ನು ಖಾತರಿಪಡಿಸಲಾಗಿದೆ. ಇದುವರೆಗೆ ಜಾತ್ಯತೀತತೆಯ ಭಾರತೀಯ ಪರಿಕಲ್ಪನೆ ಅಲ್ಲಿಯೇ ಪ್ರತಿಷ್ಠಾಪಿತವಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.