×
Ad

ಚಿನ್ನದ ಟ್ರಿಲಿಯನ್ ಡಾಲರ್ ದಿನ : ಇತಿಹಾಸದಲ್ಲೇ ಕಂಡರಿಯದ ಏಕದಿನದ ಮಾರುಕಟ್ಟೆ ಏರಿಳಿತ!

Update: 2026-01-30 14:49 IST
Photo source: X/@KobeissiLetter

ಈಗಿನ ಚಿನ್ನದ ಬೆಲೆಯಲ್ಲಿನ ಚಂಚಲತೆಯನ್ನು “ಐತಿಹಾಸಿಕ ಟ್ರೇಡಿಂಗ್ ಸ್ಥಿತಿಗಳು” ಎಂದು ವ್ಯಾಖ್ಯಾನಿಸಲಾಗುತ್ತಿದೆ. 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ನೋಡಿರುವುದಕ್ಕಿಂತಲೂ ಹೆಚ್ಚಿನ ಚಂಚಲತೆ ಚಿನ್ನದ ವಹಿವಾಟಿನಲ್ಲಿ ಕಂಡುಬರುತ್ತಿದೆ ಎಂದು ವರದಿಯಾಗಿದೆ.

ಈ ವಾರ ಚಿನ್ನದ ಮಾರುಕಟ್ಟೆಯಲ್ಲಿ ಅತೀವ ಚಂಚಲತೆ ಕಾಣಿಸಿಕೊಂಡಿದೆ. ಗುರುವಾರದಂದು ಚಿನ್ನದ ಬೆಲೆಯಲ್ಲಿ ಇತಿಹಾಸದಲ್ಲೇ ಕಂಡರಿಯದಂತಹ ಏಕದಿನದ ಮಾರುಕಟ್ಟೆ ಏರಿಳಿತವನ್ನು ದಾಖಲಿಸಿದೆ ಎಂದು ಷೇರು ವ್ಯವಹಾರದ ಬಗ್ಗೆ ಬರೆಯುವ ಮಾಧ್ಯಮವಾದ The Kobeissi Letter ಹೇಳಿದೆ.

Kobeissi ತನ್ನ ‘ಎಕ್ಸ್’ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿವರಗಳ ಪ್ರಕಾರ, ಒಂದೇ ವಹಿವಾಟು ದಿನದಲ್ಲಿ ಚಿನ್ನದ ಮಾರುಕಟ್ಟೆ ಮೌಲ್ಯವು ಅಭೂತಪೂರ್ವ 5.5 ಟ್ರಿಲಿಯನ್ ಡಾಲರ್ ನಷ್ಟು ಏರಿಳಿತ ದಾಖಲಿಸಿದೆ. ಇದು ಪ್ರಸ್ತುತ ಜಾಗತಿಕ ಸರಕು ಮಾರುಕಟ್ಟೆಗಳ ಹಿಡಿತದ ಚಲನೆಗಳ ತೀವ್ರತೆಯನ್ನು ಒತ್ತಿ ಹೇಳುತ್ತದೆ. ಅಂದರೆ 2026ರ ಆರಂಭದಲ್ಲಿ ಜಾಗತಿಕ ಸರಕು ಮಾರುಕಟ್ಟೆಗಳು ತೀವ್ರ ಏರಿಳಿತ ಮತ್ತು ದಾಖಲೆಯ ಸ್ಥಾಪನೆಯನ್ನು ಎದುರಿಸುತ್ತಿರುವುದನ್ನು ಎತ್ತಿ ತೋರಿಸಿದೆ.

ಅಭೂತಪೂರ್ವ ಏಕದಿನದ ಚಂಚಲತೆ

The Kobeissi Letter ಹೇಳಿರುವ ಪ್ರಕಾರ ಅಮೆರಿಕದ ಕಾಲಮಾನದಲ್ಲಿ ಗುರುವಾರ ಬೆಳಗ್ಗೆ 9.30 ಯಿಂದ 10.25 ನಡುವೆ (ಭಾರತೀಯ ಕಾಲಮಾನ ಸಂಜೆ 8 ಗಂಟೆಯಿಂದ 8.30 ನಡುವೆ) ಚಿನ್ನ 3.2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ. ಎಂದರೆ ಪ್ರತಿ ನಿಮಿಷಕ್ಕೆ 58 ಬಿಲಿಯನ್ ಡಾಲರ್! ಅದಾದ ಕೆಲವೇ ಸಮಯದಲ್ಲಿ ಟ್ರೆಂಡ್ ಹಿಮ್ಮುಖವಾಯಿತು. ಅಮೆರಿಕದ ಕಾಲಮಾನ ಬೆಳಿಗ್ಗೆ 10.25ರಿಂದ ಸಂಜೆ 4.00 ನಡುವೆ (ಬೆಳಿಗ್ಗೆ 10.40) ಮಾರುಕಟ್ಟೆ ಮುಕ್ತಾಯವಾದಾಗ ಚಿನ್ನವು 2.3 ಟ್ರಿಲಿಯನ್ ಡಾಲರ್ ಮೌಲ್ಯವನ್ನು ಮರಳಿ ಪಡೆದಿದೆ.

ಇತರ ಸ್ವತ್ತುಗಳಲ್ಲಿ ಇಂತಹ ಚಂಚಲತೆ ಇಲ್ಲ ಎಂದು The Kobeissi Letter ಹೇಳಿದೆ. ಬಿಟ್ ಕಾಯ್ನ್ ನ 850 ಬಿಲಿಯನ್ ಡಾಲರ್ ಮಾರುಕಟ್ಟೆಗೆ ಹೋಲಿಸಿದರೆ ಚಿನ್ನದ ದಿನದ ಏರಿಳಿತವು ಒಟ್ಟು ಕ್ರಿಪ್ರೊಕರೆನ್ಸಿ ಮಾರುಕಟ್ಟೆಯ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು! ಮತ್ತು ಆರು ಗಂಟೆಗಳ ನಡುವೆ ಈ ಚಂಚಲತೆ ಕಾಣಿಸಿಕೊಂಡಿದೆ. ಈ ಚಂಚಲತೆಯನ್ನು The Kobeissi Letter “ಐತಿಹಾಸಿಕ ಟ್ರೇಡಿಂಗ್ ಸ್ಥಿತಿಗಳು” ಎಂದು ವ್ಯಾಖ್ಯಾನಿಸಿದೆ. 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ನೋಡಿರುವುದಕ್ಕಿಂತಲೂ ಹೆಚ್ಚಿನ ಚಂಚಲತೆ ಚಿನ್ನದ ವಹಿವಾಟಿನಲ್ಲಿ ಕಂಡುಬರುತ್ತಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ

ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ತೀಕ್ಷ್ಣವಾದ ಏರಿಳಿತಗಳು ಸಂಭವಿಸಿವೆ. ನಿರಂತರ ಹಣದುಬ್ಬರ ಅಪಾಯಗಳು, ಅಸ್ಪಷ್ಟ ಬಡ್ಡಿದರದ ಟ್ರಾಜೆಕ್ಟರಿಗಳು (ಪಥಗಳು), ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ವ್ಯಾಪಾರ ಯುದ್ಧಗಳ ನಡುವೆ ಕರೆನ್ಸಿ ಸ್ಥಿರತೆಗಳ ಕುರಿತ ಕಾಳಜಿಗಳನ್ನು ಹೂಡಿಕೆದಾರರು ಎದುರಿಸುತ್ತಿದ್ದಾರೆ. ಹೀಗಾಗಿ ಈ ಕಾಳಜಿಗಳು ಸಾಂಪ್ರದಾಯಿಕವಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದ ಸ್ವತ್ತು ಆಗಿರುವ ಚಿನ್ನದತ್ತ ಹೂಡಿಕೆದಾರರನ್ನು ತಳ್ಳುತ್ತಿವೆ.

ಇದೇ ಸಂದರ್ಭದಲ್ಲಿ ದೊಡ್ಡ ಸಂಸ್ಥೆಗಳು ಆಕ್ರಮಣಕಾರಿಯಾಗಿ ಮರುಸ್ಥಾಪಿಸಲು ಪ್ರಯತ್ನಿಸುವುದು, ಆಲ್ಗಾರಿದಂ ಚಾಲಿತ ಷೇರು ವ್ಯವಹಾರ, ಉತ್ಪನ್ನ ಮಾರುಕಟ್ಟೆಗಳ ಮೇಲಿನ ನಂಬಿಕೆಗಳು (ಅಂದರೆ ಹೂಡಿಕೆದಾರರು ಮಾರ್ಜಿನ್ ಇಟ್ಟು ವಹಿವಾಟು ನಡೆಸುವುದು) ಚಿನ್ನದ ಚಂಚಲತೆಗೆ ಕೊಡುಗೆ ನೀಡುತ್ತಿವೆ. ತಜ್ಞರು ಹೇಳುವ ಪ್ರಕಾರ ಆಧುನಿಕ ಚಿನ್ನದ ಟ್ರೇಡಿಂಗ್ ಭೌತಿಕ ಬೇಡಿಕೆಯನ್ನು ಮೀರಿದ ಹಣಕಾಸಿನ ಹರಿವಿನಿಂದ ಪ್ರಭಾವಿತವಾಗಿವೆ.

ಇತರ ಲೋಹಗಳ ಮೇಲೂ ಪರಿಣಾಮ

ಚಂಚಲತೆ ಚಿನ್ನಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಳ್ಳಿ, ಪ್ಲಾಟಿನಂ ಮತ್ತು ಪಲಡಿಯಂನಂತಹ ಲೋಹಗಳೂ ಇತ್ತೀಚೆಗಿನ ದಿನಗಳಲ್ಲಿ ತೀಕ್ಷ್ಣವಾದ ಮೌಲ್ಯ ಏರಿಕೆಯನ್ನು ಕಂಡಿವೆ. ಇದು ಸರಕು ಮಾರುಕಟ್ಟೆ ಮೇಲಿನ ವಿಸ್ತರಿತ ಒತ್ತಡದ ಪ್ರತಿಫಲವಾಗಿದೆ. ಈ ಚಂಚಲತೆಗಳು ಗಂಟೆಗಳ ನಡುವೆ ಹೂಡಿಕೆದಾರರು ಅಪಾಯವಿರುವ ಅಥವಾ ಅಪಾಯವಿಲ್ಲದ ವಹಿವಾಟಿಗೆ ಬದಲಾಗುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

ಗುರುವಾರದಂದು ಭಾರತೀಯ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್)ನಲ್ಲಿ ಬೆಳ್ಳಿ ದಾಖಲೆ ಪ್ರತಿ ಕೆಜಿಗೆ ರೂ 4 ಲಕ್ಷದಷ್ಟು ವಹಿವಾಟು ನಡೆದಿದೆ. ಶೇ 6.3ರಷ್ಟು ಏರಿಕೆ ದಾಖಲಿಸಿತ್ತು. ಚಿನ್ನ ಸಾರ್ವಕಾಲಿಕ ಅಧಿಕ ಹತ್ತು ಗ್ರಾಂಗೆ 1.8 ಲಕ್ಷವನ್ನು ಸ್ಪರ್ಶಿಸಿತ್ತು.

2026ರಲ್ಲಿ ಪ್ರಮುಖ ಬ್ಯಾಂಕ್ ಗಳಾದ ಗೋಲ್ಡ್ಮನ್ ಸ್ಯಾಚ್ಸ್ ತಮ್ಮ ಬೆಲೆಯ ಗುರಿಗಳನ್ನು ಏರಿಸಿವೆ (ಷೇರು ಮೌಲ್ಯವನ್ನು ಏರಿಸುವುದು). ಹೀಗಾಗಿ ಚಿನ್ನದ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆಯಿದೆ. ಕೆಲವರ ಪ್ರಕಾರ ವರ್ಷಾಂತ್ಯಕ್ಕಾಗುವಾಗ ಚಿನ್ನ ಔನ್ಸ್ಗೆ 6000 ಡಾಲರ್ (ರೂ. 5.51 ಲಕ್ಷ) ತಲುಪುವ ಸಾಧ್ಯತೆಯಿದೆ.

ಕೃಪೆ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News