Uttar Pradesh| ದಂಪತಿ ಮೃತ್ಯು, ಮೂವರು ಮಕ್ಕಳು ಗಂಭೀರ; ವಿಷಪ್ರಾಶನ ಶಂಕೆ
ಸಾಂದರ್ಭಿಕ ಚಿತ್ರ PC: x.com/htTweets
ಗ್ರೇಟರ್ ನೋಯ್ಡಾ, ಜ.30: ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಪತಿ–ಪತ್ನಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಮೂವರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಪೋಷಕರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ವಿಷಪ್ರಾಶನದಿಂದ ಸಂಭವಿಸಿದ ಪ್ರಕರಣವೇ ಎಂಬುದರ ಜೊತೆಗೆ, ಕೊಲೆ–ಆತ್ಮಹತ್ಯೆ ಯತ್ನದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಹಣಕಾಸು ತೊಂದರೆ ಅಥವಾ ಯಾವುದೇ ತಕ್ಷಣದ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯೊಳಗೆ ಕುಟುಂಬದ ಎಲ್ಲ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತು. ಮೇಲ್ನೋಟಕ್ಕೆ ಐವರಲ್ಲಿಯೂ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿವೆ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಎಲ್ಲರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, 42 ಮತ್ತು 38 ವರ್ಷದ ಪತಿ–ಪತ್ನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರ 10 ವರ್ಷದ ಪುತ್ರಿ, 8 ವರ್ಷದ ಪುತ್ರ ಮತ್ತು 4 ವರ್ಷದ ಪುತ್ರಿಯನ್ನು ಗಂಭೀರ ಸ್ಥಿತಿಯಲ್ಲಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಕರಣ ತನಿಖೆಯಲ್ಲಿದೆ. ಪ್ರಸ್ತುತ ಇದು ಆತ್ಮಹತ್ಯೆಯ ಪ್ರಕರಣವಾಗಿರಬಹುದು ಎಂದು ತೋರುತ್ತಿದೆ,” ಎಂದು ಎಡಿಸಿಪಿ ಸಂತೋಷ್ ಕುಮಾರ್ ಹೇಳಿದ್ದಾರೆ.
10 ವರ್ಷದ ಪುತ್ರಿ ನೀಡಿದ ಮಾಹಿತಿಯಂತೆ, ಕುಟುಂಬದವರು ಕೊನೆಯದಾಗಿ ಬುಧವಾರ ರಾತ್ರಿ ಭೋಜನ ಸೇವಿಸಿದ್ದರು. ಗುರುವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಆಕೆ ಎಚ್ಚರಗೊಂಡು, ತನ್ನ ತಾಯಿ–ತಂದೆ ಎಚ್ಚರಗೊಳ್ಳುತ್ತಿಲ್ಲ ಎಂದು ಅಜ್ಜನಿಗೆ ತಿಳಿಸಿದ್ದಾಳೆ.
ಭೋಜನದಲ್ಲಿ ವಿಷ ಮಿಶ್ರಣವಾಗಿರಬಹುದೆಂಬ ಶಂಕೆಯಿದ್ದು, ಯಾವ ವಿಧದ ವಿಷ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಫೊರೆನ್ಸಿಕ್ ವರದಿಗಳ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.