×
Ad

ಉತ್ತರ ಪ್ರದೇಶ | ವೆಜ್ ಬಿರಿಯಾನಿಯಲ್ಲಿ ಮೂಳೆಗಳು ಸಿಕ್ಕಿವೆ ಎಂದು ಗದ್ದಲ ಸೃಷ್ಟಿಸಿದ ಗುಂಪು: ತನಿಖೆ ವೇಳೆ ಸತ್ಯಾಂಶ ಬಹಿರಂಗ

Update: 2025-08-04 16:58 IST

PC : freepressjournal.in\ @IndiaNewsUP_UK

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದ ಶಾಸ್ತ್ರಿ ಚೌಕ್‌ನಲ್ಲಿರುವ ಜನಪ್ರಿಯ ʼಬಿರಿಯಾನಿ ಬೇ ರೆಸ್ಟೋರೆಂಟ್ʼನಲ್ಲಿ ವೆಜ್ ಬಿರಿಯಾನಿಯಲ್ಲಿ ಮೂಳೆ ಕಂಡುಬಂದಿದೆ ಎಂದು ಹೇಳುವ ವೀಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೆಸ್ಟೋರೆಂಟ್ ಮಾಲಕರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು ಇದೊಂದು ಸುಳ್ಳು ಆರೋಪ ಎಂದು ಬಹಿರಂಗಗೊಂಡಿದೆ ಎಂದು freepressjournal.in ವರದಿ ಮಾಡಿದೆ.

ವೆಜ್ ಬಿರಿಯಾನಿಗೆ ಮೂಳೆಯನ್ನು ಇರಿಸುವ ಮೂಲಕ ರೆಸ್ಟೋರೆಂಟ್‌ನ ಮಾನಹಾನಿ ಮಾಡಲು ಉದ್ದೇಶಪೂರ್ವಕವಾಗಿ ನಡೆಸಿದ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಯ ವಿವರ:

ಜುಲೈ 31ರ ರಾತ್ರಿ ಸುಮಾರು 12 ರಿಂದ 13 ಜನರ ಗುಂಪು ರೆಸ್ಟೋರೆಂಟ್‌ಗೆ ಭೋಜನಕ್ಕೆ ಭೇಟಿ ನೀಡಿದೆ. ಗುಂಪಿನ ಕೆಲವು ಸದಸ್ಯರು ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದರೆ. ಇತರರು ಮಾಂಸಾಹಾರವನ್ನು ಆರಿಸಿಕೊಂಡಿದ್ದಾರೆ. ಊಟದ ಸಮಯದಲ್ಲಿ ವ್ಯಕ್ತಿಯೋರ್ವ ರೆಸ್ಟೋರೆಂಟ್‌ನಲ್ಲಿ ವೆಜ್ ಬಿರಿಯಾನಿಯಲ್ಲಿ ಮೂಳೆಗಳಿವೆ ಎಂದು ಆರೋಪಿಸಿದನು. ಪವಿತ್ರ ಶ್ರಾವಣ ತಿಂಗಳಲ್ಲಿ ಸಸ್ಯಾಹಾರಿ ಆಹಾರದಲ್ಲಿ ಮಾಂಸಾಹಾರಿ ವಸ್ತುಗಳನ್ನು ಬೆರೆಸುವ ಮೂಲಕ ರೆಸ್ಟೋರೆಂಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾನೆ.ಇದರಿಂದ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದ ಇತರ ಗ್ರಾಹಕರು ಗೊಂದಲಕ್ಕೆ ಒಳಗಾದರು.

ರೆಸ್ಟೋರೆಂಟ್ ಮಾಲಕ ರವಿಕರ್ ಸಿಂಗ್ ಮಧ್ಯಪ್ರವೇಶಿಸಿ ಗ್ರಾಹಕರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ ಗದ್ದಲ ತೀವ್ರಗೊಂಡಿತ್ತು. ನಂತರ ರವಿಕರ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಪ್ರತ್ಯೇಕವಾಗಿ ತಯಾರಿಸಲಾಗಿದೆ. ಕೇವಲ ಒಂದು ತಟ್ಟೆಯಲ್ಲಿ ಮಾತ್ರ ಮೂಳೆ ಹೇಗೆ ಕಂಡುಬಂದಿದೆ? ಬಿಲ್ ಪಾವತಿಸುವುದನ್ನು ತಪ್ಪಿಸಲು ಈ ರೀತಿ ಕಥೆಯನ್ನು ಕಟ್ಟಿದ್ದಾರೆ ಎಂದು ರವಿಕರ್ ಸಿಂಗ್ ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ರೆಸ್ಟೋರೆಂಟ್‌ನ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಓರ್ವ ವ್ಯಕ್ತಿ ಮಾಂಸಾಹಾರಿ ತಟ್ಟೆಯಿಂದ ಮತ್ತೋರ್ವನಿಗೆ ಮೂಳೆಯನ್ನು ಹಸ್ತಾಂತರಿಸುವುದು ಮತ್ತು ನಂತರ ಅದನ್ನು ವೆಜ್ ಬಿರಿಯಾನಿಯ ತಟ್ಟೆಯಲ್ಲಿಟ್ಟು ಸುಳ್ಳು ಆರೋಪ ಮಾಡುವುದು ಕಂಡು ಬಂದಿದೆ.

ʼನಾವು ವರ್ಷಗಳಿಂದ ಈ ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದೇವೆ. ನಮ್ಮ ಗ್ರಾಹಕರ ಧಾರ್ಮಿಕ ಭಾವನೆಗಳನ್ನು ಯಾವಾಗಲೂ ಗೌರವಿಸುತ್ತೇವೆ. ಈ ರೀತಿಯ ತಪ್ಪು ಮಾಹಿತಿಯು ನಮ್ಮ ವ್ಯವಹಾರವನ್ನು ಮಾತ್ರವಲ್ಲದೆ ಕೋಮು ಸಾಮರಸ್ಯದ ಮೇಲೂ ಪರಿಣಾಮ ಬೀರುತ್ತದೆʼ ಎಂದು ರವಿಕರ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News