ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ಗೆ ಝೆಡ್ ವರ್ಗದ ಭದ್ರತೆ ಒದಗಿಸಿದ ಕೇಂದ್ರ
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ | PC : PTI
ಹೊಸದಿಲ್ಲಿ : ಕೇಂದ್ರ ಸರಕಾರವು ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಸಿಆರ್‌ಪಿಎಫ್‌ನಿಂದ ಝೆಡ್ ವರ್ಗದ ಭದ್ರತೆಯನ್ನು ಒದಗಿಸಿದೆ. ಗೆಹ್ಲೋಟ್ ಅವರಿಗೆ ಭದ್ರತಾ ಬೆದರಿಕೆಯಿರುವ ಬಗ್ಗೆ ಗುಪ್ತಚರ ಸಂಸ್ಥೆ(ಐಬಿ)ಯ ಇತ್ತೀಚಿನ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ಲಿಖಿತ ಆದೇಶವನ್ನು ಹೊರಡಿಸಿದೆ.
ಸಿಆರ್‌ಪಿಎಫ್ ಈಗಾಗಲೇ ಕರ್ನಾಟಕ ರಾಜ್ಯಪಾಲರ ಭದ್ರತೆಯ ಹೊಣೆಯನ್ನು ವಹಿಸಿಕೊಂಡಿದ್ದು,ಸಂಬಂಧಿತ ಕಾರ್ಯವಿಧಾನಗಳು ಈ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವಿಷಯವನ್ನು ಬಲ್ಲ ಮೂಲಗಳು ತಿಳಿಸಿವೆ.
ಗೆಹ್ಲೋಟ್ ಕರ್ನಾಟಕದಲ್ಲಿ ಮಾತ್ರ ಝೆಡ್ ವರ್ಗದ ಭದ್ರತೆಯನ್ನು ಹೊಂದಿರಲಿದ್ದಾರೆ.
ಗೆಹ್ಲೋಟ್ (76) 2021,ಜುಲೈನಲ್ಲಿ ಕರ್ನಾಟಕದ 13ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ವ್ಯಕ್ತಿಯಾಗಿದ್ದಾರೆ.
ಇದಕ್ಕೂ ಮುನ್ನ 2014ರಿಂದ 2021ರವರೆಗೆ ಅವರು ಕೇಂದ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. ರಾಜ್ಯಸಭೆಯಲ್ಲಿ ಸದನ ನಾಯಕನ ಹುದ್ದೆಯನ್ನೂ ನಿರ್ವಹಿಸಿದ್ದ ಅವರು, ಬಿಜೆಪಿಯ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.