ಇಪಿಎಫ್‍ಓ ಮಾಸಿಕ ವೇತನ ಮಿತಿ 25ರಿಂದ 30 ಸಾವಿರಕ್ಕೆ ಹೆಚ್ಚಿಸಲು ಕೇಂದ್ರ ಸರಕಾರ ಚಿಂತನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಭವಿಷ್ಯನಿಧಿಗೆ 2014ರಲ್ಲಿ ನಿಗದಿಪಡಿಸಿದ 15 ಸಾವಿರ ರೂಪಾಯಿಗಳ ಮಾಸಿಕ ವೇತನ ಮಿತಿಯನ್ನು 25 ರಿಂದ 30 ಸಾವಿರ ರೂಪಾಯಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ವೇತನ ಮಿತಿಯು ಯಾವುದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸಿಬ್ಬಂದಿಯ ಮಾಸಿಕ ಇಪಿಎಫ್‍ಓ ದೇಣಿಗೆಗೆ ಪರಿಗಣಿಸುವ ಗರಿಷ್ಠ ವೇತನವಾಗಿರುತ್ತದೆ. ಈ ಮಿತಿಯನ್ನು 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಈ ಮೊದಲು ಚರ್ಚಿಸಿತ್ತು. ಆದರೆ ಉದ್ಯೋಗದಾತರ ವಿರೋಧದಿಂದಾಗಿ ಇದು ನನೆಗುದಿಗೆ ಬಿದ್ದಿತ್ತು. ಹಾಲಿ ಇರುವ ಮಿತಿಯನ್ನೇ ಮುಂದುವರಿಸುವಂತೆ ಉದ್ಯೋಗದಾತರು ಒತ್ತಾಯಿಸಿದ್ದಾರೆ. ಹೆಚ್ಚಿನ ಮಿತಿ ನಿಗದಿಪಡಿಸಿದಲ್ಲಿ ದೇಣಿಗೆ ಪ್ರಮಾಣ ಕಡಿಮೆ ಮಾಡುವ ಸಲಹೆಯೂ ಸರ್ಕಾರದ ಮುಂದಿದೆ. ಆದರೆ ಕೆಲ ಕಾರ್ಮಿಕ ಸಂಘಟನೆಗಳು ವೇತನ ಮಿತಿಯನ್ನು 30 ಸಾವಿರಕ್ಕೆ ನಿಗದಿಪಡಿಸಲು ಆಗ್ರಹಿಸಿವೆ.
ಹಾಲಿ ಇರುವ ಮಾಸಿಕ 15 ಸಾವಿರ ರೂಪಾಯಿ ವೇತನ ಮಿತಿಯನ್ನು 2014ರ ಸೆಪ್ಟೆಂಬರ್ ನಲ್ಲಿ ನಿಗದಿಪಡಿಸಲಾಗಿದೆ. ಇದರ ಅನ್ವಯ 15 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವವರು ಕೂಡಾ ಇಪಿಎಫ್‍ಓ ಭಾಗವಾಗಲು ಅವಕಾಶವಿದೆ. ಆ ಬಳಿಕ ವೇತನದಲ್ಲಿ ಭಾರಿ ಏರಿಕೆಯಾಗಿದ್ದು, ಹಲವು ರಾಜ್ಯಗಳಲ್ಲಿ ಕನಿಷ್ಠ ವೇತನ ಕೂಡಾ ಹೆಚ್ಚಿದೆ. ದಿನಗೂಲಿ ನೌಕರರು ಕೂಡಾ ಇದಕ್ಕಿಂತ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಇದರಿಂದಾಗಿ ಹಲವು ಕಡಿಮೆ ವೇತನ ಅಥವಾ ಕನಿಷ್ಠ ವೇತನ ಪಡೆಯುವ ಕಾರ್ಮಿಕರು ಸಾಮಾಜಿಕ ಭದ್ರತಾ ವ್ಯವಸ್ಥೆಯಿಂದ ಹೊರಗುಳಿಯುವಂತಾಗಿದೆ. ಈ ವಾರದ ಆರಂಭದಲ್ಲಿ ಸುಪ್ರೀಂಕೋರ್ಟ್, ಕಾರ್ಮಿಕ ಸಚಿವಾಲಯಕ್ಕೆ ಸೂಚನೆ ನೀಡಿ, ಈ ಮಿತಿಯನ್ನು ನಾಲ್ಕು ತಿಂಗಳ ಒಳಗಾಗಿ ಪರಿಷ್ಕರಿಸುವಂತೆ ಆದೇಶಿಸಿತ್ತು.
ಈ ನಡೆಯು ಇಪಿಎಫ್‍ಓ ಗ್ರಾಹಕ ನೆಲೆಯನ್ನು ವಿಸ್ಕೃತಗೊಳಿಸಲಿದ್ದು, ಹೆಚ್ಚು ಕಾರ್ಮಿಕರನ್ನು ಅದರಲ್ಲೂ ಮುಖ್ಯವಾಗಿ ಅಸಂಘಟಿತ ಕಾರ್ಮಿಕರನ್ನು ಕೂಡಾ ಈ ವ್ಯಾಪ್ತಿಗೆ ತರಲಿದೆ. 2024ರ ಹಣಕಾಸು ವರ್ಷದ ಅಂಕಿ ಅಂಶಗಳ ಪ್ರಕಾರ ಇಪಿಎಫ್‍ಓಗೆ 7.4 ಕೋಟಿ ಕಾರ್ಮಿಕರು ದೇಣಿಗೆ ಪಾವತಿಸುತ್ತಿದ್ದಾರೆ. ಆದರೆ ಹಾಲಿ ಪಾವತಿಸುತ್ತಿರುವ ಹಾಗೂ ಈ ಹಿಂದೆ ಪಾವತಿಸಿದ ಒಟ್ಟು ಸದಸ್ಯರ ಸಂಖ್ಯೆ 32 ಕೋಟಿಯಷ್ಟಿದೆ.