ಎನ್‌ಡಿಎ ಸರಕಾರ 11 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮರು ವ್ಯಾಖ್ಯಾನಿಸಿದೆ: ಪ್ರಧಾನಿ ಮೋದಿ
Photo : newsonair.gov.in
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತನ್ನ 11 ವರ್ಷಗಳ ಅಧಿಕಾರಾವಧಿಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮರು ವ್ಯಾಖ್ಯಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.
ವಿಜ್ಞಾನ, ಶಿಕ್ಷಣ, ಕ್ರೀಡೆ, ಸ್ಟಾರ್ಟ್ಅಪ್ಸ್ ಹಾಗೂ ಶಸಸ್ತ್ರ ಪಡೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಹಾಗೂ ಹಲವರಿಗೆ ಪ್ರೇರಣೆ ನೀಡಿದ್ದಾರೆ ಎಂದು ನರೇಂದ್ರ ಮೋದಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಅಪಾರ ಪ್ರಯೋಜನ ನೀಡಿರುವ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅವರು ಉಲ್ಲೇಖಿಸಿದರು. ಸ್ವಚ್ಛ ಭಾರತ್ ಮತ್ತು ಜನ್ಧನ್ ಖಾತೆಗಳಂತಹ ವಿವಿಧ ಉಪಕ್ರಮಗಳು ಮಹಿಳೆಯರ ಸಬಲೀಕರಣದ ಮೇಲೆ ಕೇಂದ್ರೀಕರಿಸಿವೆ. ಸ್ವಚ್ಛ ಭಾರತ್ ಘನತೆಯನ್ನು ಖಚಿತಪಡಿಸುವ ಗುರಿ ಹೊಂದಿದ್ದರೆ, ಜನ್ಧನ್ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ.
‘ಉಜ್ವಲ ಯೋಜನಾ’ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ನಿಂದ ಕಾರ್ಯ ನಿರ್ವಹಿಸುವ ಹೊಗೆ ಮುಕ್ತ ಅಡುಗೆ ಮನೆಗಳನ್ನು ಒದಗಿಸಿದರೆ, ಮುದ್ರಾ ಯೋಜನೆ ಲಕ್ಷಾಂತರ ಮಹಿಳೆಯರು ಉದ್ಯಮಿಗಳಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಿಸಿದೆ. ಪ್ರಧಾನಿ ಆವಾಸ್ ಯೋಜನೆಯಲ್ಲಿ ಮಹಿಳೆಯ ಹೆಸರಿನಲ್ಲಿರುವ ಮನೆಗಳು ಕೂಡ ಗಮನಾರ್ಹ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
‘ಬೇಟಿ ಬಚಾವೊ, ಬೇಟಿ ಪಡಾವೊ’ ಕಾರ್ಯಕ್ರಮ ಹೆಣ್ಣು ಮಗುವಿನ ರಕ್ಷಣೆಯ ರಾಷ್ಟ್ರೀಯ ಚಳವಳಿಗೆ ನಾಂದಿ ಹಾಡಿದೆ ಎಂದು ಅವರು ತಿಳಿಸಿದರು.
ಸರಕಾರ ನಡೆಸುವ ಪೌರತ್ವ ಸಂವಹನ ವೇದಿಕೆಯ ಥ್ರೆಡ್ ಅನ್ನು ಪ್ರಧಾನಿ ಅವರು ಹಂಚಿಕೊಂಡಿದ್ದಾರೆ. ಇದರಲ್ಲಿ ಸರಕಾರದ ಹಲವು ಯೋಜನೆಗಳಿಂದ ಮಹಿಳೆಯರಿಗೆ ಉಂಟಾದ ಪ್ರಯೋಜನಗಳನ್ನು ಪಟ್ಟಿ ಮಾಡಲಾಗಿದೆ.