7ನೇ ತರಗತಿ ವಿದ್ಯಾರ್ಥಿಗೆ ಥಳಿಸಲು 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಆದೇಶ!
ಸಾಂದರ್ಭಿಕ ಚಿತ್ರ
ಹೈದರಾಬಾದ್, ಡಿ. 23: ಹೈದರಾಬಾದ್ ನ ಕೊಂಪಳ್ಳಿ ಸರಕಾರಿ ಹೈಸ್ಕೂಲ್‌ನಲ್ಲಿ ಪ್ರಾಂಶುಪಾಲರ ಆದೇಶದಂತೆ 10ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದು ಏಳನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಹೊಡೆದಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.
ಆರೋಪಿ ಪ್ರಾಂಶುಪಾಲ ಕೃಷ್ಣ, ದುಂಡಿಗಲ್‌ನ ಉಸ್ತುವಾರಿ ಮಂಡಲ ಶಿಕ್ಷಣಾಧಿಕಾರಿಯೂ ಆಗಿದ್ದಾರೆ. ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಕ್ಷೇಮವನ್ನು ಖಾತರಿಪಡಿಸುವುದು ಈ ಹುದ್ದೆಯ ಜವಾಬ್ದಾರಿಯಾಗಿದೆ. ಹಾಗಾಗಿ, ಪ್ರಾಂಶುಪಾಲರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಶಾಲೆಯ ಸೈಕಲ್ ಸ್ಟ್ಯಾಂಡ್‌ನಲ್ಲಿ ಸೈಕಲ್ ಭಾಗಗಳನ್ನು ಕಳವುಗೈದಿರುವ ಮತ್ತು ಚಕ್ರಗಳ ಗಾಳಿ ತೆಗೆದ ಸಣ್ಣ ಪ್ರಕರಣಕ್ಕೆ ಸಂಬಂಧಿಸಿದ ವಿದ್ಯಮಾನ ಇದಾಗಿದೆ.
ಸೋಮವಾರ, ಮಧು ಎಂಬ ಶಿಕ್ಷಕ ಏಳನೇ ತರಗತಿ ವಿದ್ಯಾರ್ಥಿ ಫಣೀಂದ್ರ ಸೂರ್ಯನನ್ನು ಸೈಕಲ್ ಗಳನ್ನು ಪರಿಶೀಲಿಸುವುದಕ್ಕಾಗಿ ಸೈಕಲ್ ಸ್ಟ್ಯಾಂಡ್ ಗೆ ಕಳುಹಿಸಿದ್ದರು ಎನ್ನಲಾಗಿದೆ. ಸೂರ್ಯ ಸೈಕಲ್ ಸ್ಟ್ಯಾಂಡ್ ನಲ್ಲಿರುವುದನ್ನು ಇನ್ನೋರ್ವ ಶಿಕ್ಷಕ ಚಾರಿ ನೋಡಿದರು. ಸೈಕಲ್ ಗಳ ಗಾಳಿ ತೆಗೆಯುವುದು ಸೂರ್ಯ ಎಂದು ಭಾವಿಸಿದ ಆ ಶಿಕ್ಷಕ ಸೂರ್ಯನನ್ನು ಹಿಡಿದು ಪ್ರಾಂಶುಪಾಲರ ಕಚೇರಿಗೆ ಕರೆದುಕೊಂಡು ಹೋದರು.
ನ್ಯಾಯೋಚಿತ ವಿಚಾರಣೆ ನಡೆಸುವ ಬದಲು, ಪ್ರಾಂಶುಪಾಲ ಕೃಷ್ಣ 10ನೇ ತರಗತಿಯ ಒಂಭತ್ತು ವಿದ್ಯಾರ್ಥಿಗಳನ್ನು ಕರೆದು, ಶಿಕ್ಷೆಯಾಗಿ ಸೂರ್ಯನ ಬೆನ್ನಿಗೆ ಬೆತ್ತದಿಂದ ಹೊಡೆಯುವಂತೆ ಆದೇಶಿಸಿದರು ಎನ್ನಲಾಗಿದೆ.
ಬಾಲಕನ ತಂದೆ ಶಿವರಾಮಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಹಲ್ಲೆಯಲ್ಲಿ ಶಿಕ್ಷಕರಾದ ಮಧು ಮತ್ತು ಚಾರಿ ಹಾಗೂ ಪ್ರಾಂಶುಪಾರ ಪಾತ್ರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.