×
Ad

79,000ಕೋ.ರೂ.ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಕೇಂದ್ರದಿಂದ ಹಸಿರು ನಿಶಾನೆ

Update: 2025-12-29 21:50 IST

ಸಾಂದರ್ಭಿಕ ಚಿತ್ರ | Photo Credit : PTI 

ಹೊಸದಿಲ್ಲಿ,ಡಿ.29: ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸೋಮವಾರ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) 79,000 ಕೋ.ರೂ ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಸಿಎ ಸಭೆಯಲ್ಲಿ ನೀಡಲಾದ ಅನುಮತಿಗಳು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗಾಗಿ ವ್ಯಾಪಕ ರಕ್ಷಣಾ ಉಪಕರಣಗಳಿಗೆ ಸಂಬಂಧಿಸಿವೆ.

ಸಭೆಯಲ್ಲಿ ಸೇನೆಯ ಆರ್ಟಿಲರಿ ರೆಜಿಮೆಂಟ್‌ಗಳಿಗಾಗಿ ಲಾಯ್ಟರ್ ಮ್ಯುನಿಷನ್ ಸಿಸ್ಟಮ್, ಚಿಕ್ಕ ಗಾತ್ರದ ಮತ್ತು ಕಡಿಮೆ ಎತ್ತರದಲ್ಲಿ ಹಾರುವ ಡ್ರೋನ್‌ಗಳನ್ನು ಪತ್ತೆ ಹಚ್ಚುವ ‘ಲೋ ಲೆವೆಲ್ ಲೋ ವೇಟ್’ ರಾಡಾರ್‌ಗಳು, ಪಿನಾಕಾ ಬಹು ರಾಕೆಟ್ ಉಡಾವಣಾ ವ್ಯವಸ್ಥೆಯ ವ್ಯಾಪ್ತಿ ಮತ್ತು ನಿಖರತೆಯನ್ನು ಹೆಚ್ಚಿಸಲು ದೀರ್ಘವ್ಯಾಪ್ತಿಯ ನಿರ್ದೇಶಿತ ರಾಕೆಟ್‌ಗಳು ಮತ್ತು ಇಂಟಿಗ್ರೇಟೆಡ್ ಡ್ರೋನ್ ಡಿಟೆಕ್ಷನ್ ಆ್ಯಂಡ್ ಇಂಟರ್‌ಡಿಕ್ಷನ್ ಸಿಸ್ಟಮ್ ಎಂಕೆ-ಎಚ್ ಖರೀದಿಗಾಗಿ ‘ಅಗತ್ಯದ ಒಪ್ಪಿಗೆ’ಯನ್ನು ನೀಡಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ನೌಕಾಪಡೆಗಾಗಿ ಬೊಲಾರ್ಡ್ ಪುಲ್ ಟಗ್‌ಗಳು, ಹೈ ಫ್ರೀಕ್ವೆನ್ಸಿ ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೊ ಮ್ಯಾನ್‌ಪ್ಯಾಕ್‌ಗಳ ಖರೀದಿಗೆ ಹಾಗೂ ಅಧಿಕ ಎತ್ತರ ಮತ್ತು ದೀರ್ಘವ್ಯಾಪ್ತಿಯ ದೂರ ನಿಯಂತ್ರಿತ ವಿಮಾನ ವ್ಯವಸ್ಥೆಗಳನ್ನು ಲೀಸ್ ಆಧಾರದಲ್ಲಿ ಪಡೆಯಲು ಅನುಮೋದನೆ ನೀಡಲಾಗಿದೆ.

ವಾಯುಪಡೆಗಾಗಿ ಸ್ವಯಂಚಾಲಿತ ಟೇಕ್-ಆಫ್ ಲ್ಯಾಂಡಿಂಗ್ ರಿಕಾರ್ಡಿಂಗ್ ಸಿಸ್ಟಮ್, ಆಗಸದಿಂದ ಆಗಸಕ್ಕೆ ಚಿಮ್ಮುವ ಅಸ್ತ್ರ ಎಂಕೆ-2 ಕ್ಷಿಪಣಿಗಳು, ತೇಜಸ್ ಲಘು ವಿಮಾನಗಳ ಪೈಲಟ್‌ಗಳಿಗೆ ತರಬೇತಿ ನೀಡಲು ಫುಲ್ ಮಿಷನ್ ಸ್ಟಿಮ್ಯುಲೇಟರ್ ಮತ್ತು ಸ್ಪೈಸ್-1000 ದೀರ್ಘವ್ಯಾಪ್ತಿಯ ಕಿಟ್‌ಗಳ ಖರೀದಿಗಾಗಿ ಒಪ್ಪಿಗೆ ನೀಡಲಾಗಿದೆ.

ರಕ್ಷಣಾ ಉತ್ಪಾದನೆಯಲ್ಲಿ 1.8 ಲ.ಕೋ.ರೂ. ಹೂಡಿಕೆಗೆ ಅದಾನಿ ಯೋಜನೆ

ಅದಾನಿ ಗ್ರೂಪ್ ಮುಂದಿನ ವರ್ಷ ರಕ್ಷಣಾ ಉತ್ಪಾದನೆಯಲ್ಲಿ 1.8 ಲ.ಕೋ.ರೂ.ಗಳನ್ನು ಹೂಡಿಕೆ ಮಾಡಲು ಯೋಜಿಸಿದೆ. ಭಾರತದ ಭವಿಷ್ಯದ ಯುದ್ಧಸಾಮರ್ಥ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಬಯಸಿರುವ ಅದು ಮಾನವರಹಿತ ಮತ್ತು ಸ್ವಾಯತ್ತ ವ್ಯವಸ್ಥೆಗಳು ಹಾಗೂ ಅತ್ಯಾಧುನಿಕ ನಿರ್ದೇಶಿತ ಶಸ್ತ್ರಾಸ್ತ್ರಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ಗಮನವನ್ನು ಕೇಂದ್ರೀಕರಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್‌ನ ಕೆಲವು ಮಿಲಿಟರಿ ಹಾರ್ಡ್‌ವೇರ್‌ಗಳನ್ನು ‘ಆಪರೇಷನ್ ಸಿಂಧೂರ’ದಲ್ಲಿ ಬಳಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News