×
Ad

ತ್ರಿಪುರ ವಿದ್ಯಾರ್ಥಿಯ ಹತ್ಯೆ| ಮೃತನ ತಂದೆ ಜೊತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ದೂರವಾಣಿ ಮೂಲಕ ಮಾತುಕತೆ; ಕಠಿಣ ಶಿಕ್ಷೆಯ ಭರವಸೆ

Update: 2025-12-29 19:47 IST

ಸಿಎಂ ಪುಷ್ಕರ್ ಸಿಂಗ್ ಧಾಮಿ | Photo Credit : PTI  

ಡೆಹ್ರಾಡೂನ್: ಡೆಹ್ರಾಡೂನ್‌ ನಲ್ಲಿ ತ್ರಿಪುರ ಮೂಲದ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಮವಾರ ಮೃತನ ತಂದೆ ತರುಣ್ ಪ್ರಸಾದ್ ಚಕ್ಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೂರವಾಣಿ ಸಂಭಾಷಣೆಯಲ್ಲಿ ಧಾಮಿ, ತಮ್ಮ ಮಗನನ್ನು ಕಳೆದುಕೊಂಡ ಕುಟುಂಬದ ನೋವಿಗೆ ಸಂತಾಪ ಸೂಚಿಸಿ, ಈ ಘಟನೆ ತಮಗೆ ವೈಯಕ್ತಿಕವಾಗಿ ದುಃಖ ತಂದಿದೆ ಎಂದು ಹೇಳಿದರು. ಉತ್ತರಾಖಂಡಕ್ಕೆ ದೇಶ–ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ; ಇಂತಹ ಘಟನೆಗಳು ರಾಜ್ಯದ ಶಾಂತ ವಾತಾವರಣಕ್ಕೆ ವಿರುದ್ಧವಾಗಿವೆ ಎಂದು ಅವರು ಹೇಳಿದರು. ಪ್ರಕರಣದಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ನೇಪಾಳಕ್ಕೆ ಪರಾರಿಯಾಗಿರುವ ಶಂಕೆ ಇದ್ದು, ಬಹುಮಾನ ಘೋಷಿಸಿ ಆತನ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ವಿಚಾರವಾಗಿ ತ್ರಿಪುರ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿರುವುದಾಗಿ ಧಾಮಿ ತಿಳಿಸಿದ್ದಾರೆ. ರಾಜ್ಯ ಸರಕಾರ ಸಂತ್ರಸ್ತರ ಕುಟುಂಬದೊಂದಿಗೆ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತಿದ್ದು, ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದರು.

ಡೆಹ್ರಾಡೂನ್‌ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಯಾಗಿದ್ದ 24 ವರ್ಷದ ಏಂಜೆಲ್ ಚಕ್ಮಾ ಅವರ ಮೇಲೆ ಡಿಸೆಂಬರ್ 9ರಂದು ಕೆಲ ಯುವಕರು ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಡಿ. 26ರಂದು ಮೃತಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News