×
Ad

ದಿಲ್ಲಿಯನ್ನು ಆವರಿಸಿದ ದಟ್ಟ ಮಂಜು| 120ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು

Update: 2025-12-29 20:50 IST

Photo Credit ; PTI 

ಹೊಸದಿಲ್ಲಿ, ಡಿ. 29: ದಿಲ್ಲಿ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ವಿಮಾನ ಹಾಗೂ ರೈಲು ಸಂಚಾರಗಳಿಗೆ ಅಡ್ಡಿ ಉಂಟಾಗಿದೆ.

ನೂರಾರು ವಿಮಾನಗಳ ಸಂಚಾರ ರದ್ದಾಗಿದೆ ಅಥವಾ ವಿಳಂಬವಾಗಿದೆ. ರೈಲುಗಳು ನಿಗದಿತ ಸಮಯಕ್ಕಿಂತ ಗಂಟೆಗಳ ಕಾಲ ತಡವಾಗಿ ಸಂಚರಿಸಿದೆ. ಇದರಿಂದ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದರು.

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ)ದಲ್ಲಿ 64 ನಿರ್ಗಮನ ಹಾಗೂ 64 ಆಗಮನ ವಿಮಾನಗಳು ಸೇರಿ ಕನಿಷ್ಠ 128 ವಿಮಾನಗಳ ಹಾರಾಟ ರದ್ದಾಗಿವೆ. ಕಡಿಮೆ ದೃಗ್ಗೋಚರತೆಯ ಕಾರಣಕ್ಕಾಗಿ 8 ವಿಮಾನಗಳ ಸಂಚಾರದ ಪಥ ಬದಲಾಯಿಸಲಾಗಿದೆ. ಸುಮಾರು 200 ವಿಮಾನಗಳು ವಿಳಂಬವಾಗಿ ಸಂಚರಿಸಿವೆ ಎಂದು ಪ್ಲೈಟ್‌ರಾಡರ್24 ವೆಬ್‌ಸೈಟ್ ತಿಳಿಸಿದೆ.

ವಿಮಾನ ನಿಲ್ದಾಣಗಳಲ್ಲಿ ದೃಗ್ಗೋಚರತೆ 50 ಮೀಟರ್‌ಗಿಂತಲೂ ಕೆಳಗೆ ಇಳಿಕೆಯಾಗಿದೆ. ಇದರಿಂದ ಸಿಎಟಿ 3ರ ಪರಿಸ್ಥಿತಿ ಅಡಿಯಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಯುತ್ತಿದೆ. ಸಿಎಟಿ 3 ದಟ್ಟ ಮಂಜಿನ ಸಂದರ್ಭ ವಿಮಾನಗಳು ಭೂಸ್ಪರ್ಶ ಮಾಡಲು ಬಳಸುವ ಸುಧಾರಿತ ವ್ಯವಸ್ಥೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಾಂಕ (ಎಕ್ಯುಐ) ಸೋಮವಾರ 400 ದಾಟಿದ್ದು, ವಾಯು ಮಾಲಿನ್ಯ ‘‘ತೀವ್ರ ಮಟ್ಟ’’ಕ್ಕೆ ಇಳಿದಿದೆ.

ಪ್ರತಿಕೂಲ ಹವಾಮಾನದಿಂದಾಗಿ ಇಂಡಿಗೋ ತನ್ನ ಜಾಲದಾದ್ಯಂತ 80 ವಿಮಾನಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಸುಮಾರು ಅರ್ಧದಷ್ಟು ವಿಮಾನಗಳ ಸಂಚಾರವನ್ನು ದಿಲ್ಲಿ ವಿಮಾನದಲ್ಲಿ ರದ್ದುಗೊಳಿಸಲಾಗಿದೆ. ವಿಮಾನ ಸಂಚಾರಕ್ಕೆ ತೊಂದರೆ ಉಂಟಾದ ಇತರ ವಿಮಾನ ನಿಲ್ದಾಣಗಳಲ್ಲಿ ಮುಂಬೈ, ಬೆಂಗಳೂರು, ಕೊಚ್ಚಿ, ಹೈದರಾಬಾದ್, ಕೋಲ್ಕತಾ, ಅಮೃತಸರ, ಚಂಡಿಗಢ, ಜೈಪುರ, ಡೆಹ್ರಾಡೂನ್, ಇಂದೋರ್, ಪಾಟ್ನಾ ಹಾಗೂ ಭೋಪಾಲ್ ಸೇರಿವೆ.

‘‘ದಿಲ್ಲಿ ಹಾಗೂ ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ದಟ್ಟ ಮಂಜು ಆವರಿಸಿರುವುದು ಮುಂದುವರಿದಿದೆ. ಇದರಿಂದಾಗಿ ದೃಗ್ಗೋಚರತೆ ಕಡಿಮೆಯಾಗಿದ್ದು, ವಿಮಾನಗಳ ಸಂಚಾರ ಎಂದಿಗಿಂತ ನಿಧಾನವಾಗಿದೆ’’ ಎಂದು ಇಂಡಿಗೊ ‘ಎಕ್ಸ್’ನ ತನ್ನ ಪೋಸ್ಟ್‌ನಲ್ಲಿ ಹೇಳಿದೆ.

ರೈಲು ಸಂಚಾರ ಕೂಡ ವ್ಯತ್ಯಯಗೊಂಡಿದೆ. ಹೊಸದಿಲ್ಲಿ ಹಾಗೂ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ಹಲವು ರೈಲುಗಳು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿದವು.

ಪಂಜಾಬ್, ಹರ್ಯಾಣದಲ್ಲಿ ತೀವ್ರ ಚಳಿ

ಪಂಜಾಬ್ ಹಾಗೂ ಹರ್ಯಾಣದಲ್ಲಿ ಸೋಮವಾರ ಕೂಡ ತೀವ್ರ ಚಳಿ ಮುಂದುವರಿದಿದ್ದು, ಹೆಚ್ಚಿನ ಸ್ಥಳಗಳಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದ ದೃಗ್ಗೋಚರತೆ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹರ್ಯಾಣದ ಹಿಸ್ಸಾರ್ ಅತ್ಯಂತ ಶೀತಲ ಸ್ಥಳವಾಗಿದ್ದು, ಅಲ್ಲಿ ತಾಪಮಾನ 2.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಕಡಿಮೆ.

ಹರ್ಯಾಣದ ಇತರ ಸ್ಥಳಗಳ ಪೈಕಿ ಅಂಬಾಲದಲ್ಲಿ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಅಧಿಕ. ಕರ್ನಾಲ್‌ನಲ್ಲಿ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಸರಾಸರಿಗಿಂತ 3 ಡಿಗ್ರಿ ಸೆಲ್ಸಿಯಸ್ ಅಧಿಕ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News