ಎಸ್‌ಐಆರ್ ಪ್ರಕ್ರಿಯೆ ವೇಳೆ ಸಂಭವಿಸಿದ 33 ಬಿಎಲ್‌ಒಗಳ ಸಾವು ನ್ಯಾಯವೇ?: ಸರಕಾರಕ್ಕೆ ಕಪಿಲ್ ಸಿಬಲ್ ಪ್ರಶ್ನೆ
ಕಪಿಲ್ ಸಿಬಲ್ | Photo Credit ; PTI
ಹೊಸದಿಲ್ಲಿ,ಡಿ.29: ದೇಶದ ವಿವಿಧ ಭಾಗಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿಕೊಂಡಿದ್ದ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಾವಿನ ಕುರಿತು ಸೋಮವಾರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು, ಓರ್ವ ‘ನುಸುಳುಕೋರನ’ ಉಪಸ್ಥಿತಿ ಸರಿಯಲ್ಲ, ಆದರೆ ಬಿಎಲ್‌ಒಗಳ ಸಾವು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ರವಿವಾರ ಬಿಎಲ್‌ಒ ಓರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಸಿಬಲ್ ಹೇಳಿಕೆ ಹೊರಬಿದ್ದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಕಾರ್ಯಭಾರದ ಒತ್ತಡವು ಬಿಎಲ್‌ಒ ಸಾವಿಗೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.
‘‘ಬಂಗಾಳದಲ್ಲಿ ಇನ್ನೋರ್ವ ಬಿಎಲ್‌ಒ ಆತ್ಮಹತ್ಯೆ. ದೇಶಾದ್ಯಂತ ಒಟ್ಟು 33. ದೇಶದೊಳಗೆ ಒಬ್ಬ ‘ನುಸುಳುಕೋರ’ ಇದ್ದರೆ ಸರಿಯಲ್ಲ,ಆದರೆ 33 ಬಿಎಲ್‌ಒಗಳು ಸತ್ತರೆ ಅದು ಸರಿಯೇ?’’ಎಂದು ಸಿಬಲ್ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪ.ಬಂಗಾಳದ ಬಂಕುರಾ ಜಿಲ್ಲೆಯ ರಾಣಿಬಂಧ ಬ್ಲಾಕ್‌ನ ಶಾಲೆಯೊಂದರ ಆವರಣದಲ್ಲಿ ರವಿವಾರ ಬೆಳಿಗ್ಗೆ ಹರಧನ್ ಮಂಡಲ್ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಬರೆದಿಟ್ಟಿದ್ದ ಆತ್ಮಹತ್ಯೆ ಚೀಟಿಯೂ ಸ್ಥಳದಲ್ಲಿ ಪತ್ತೆಯಾಗಿದ್ದು,ಬಿಎಲ್‌ಒ ಆಗಿ ಕೆಲಸದ ಒತ್ತಡವನ್ನು ನಿಭಾಯಿಸಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಅದರಲ್ಲಿ ಹೇಳಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ಮಂಡಲ್ ಶಾಲಾಶಿಕ್ಷಕರಾಗಿದ್ದು,ರಾಣಿಬಂಧ ಬ್ಲಾಕ್‌ನ ರಾಜಾಕಾಟಾ ಪ್ರದೇಶದ ಮತಗಟ್ಟೆ 206ರಲ್ಲಿ ಬಿಎಲ್‌ಒ ಆಗಿದ್ದರು ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.