×
Ad

ಜಿಎಸ್‌ಟಿ ಕಡಿತದ ಲಾಭ ಗ್ರಾಹಕರಿಗೆ ವರ್ಗಾಯಿಸಿ: ಉದ್ಯಮಗಳಿಗೆ ಸಚಿವ ಗೋಯಲ್ ಆಗ್ರಹ

Update: 2025-09-04 21:48 IST

ಪಿಯೂಷ ಗೋಯಲ್ | PC : PTI

ಹೊಸದಿಲ್ಲಿ,ಸೆ.4: ಜಿಎಸ್‌ಟಿ ದರ ಪರಿಷ್ಕರಣೆಯನ್ನು ಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಸುಧಾರಣೆ ಎಂದು ಬಣ್ಣಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ ಗೋಯಲ್ ಅವರು ತೆರಿಗೆ ಇಳಿಕೆಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಉದ್ಯಮಗಳನ್ನು ಆಗ್ರಹಿಸಿದ್ದಾರೆ.

ಗುರುವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಸುಧಾರಣೆಗಳು ಎಲ್ಲ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಲಿವೆ ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲಿವೆ ಎಂದು ಹೇಳಿದರು.

ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಮಾರಾಟವನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುವಂತೆ ಅವರು ಕೈಗಾರಿಕೋದ್ಯಮಗಳನ್ನು ಆಗ್ರಹಿಸಿದರು.

ಭಾರತದ ಬೆಳವಣಿಗೆ ಕುರಿತು ಮಾತನಾಡಿದ ಗೋಯಲ್, ದೇಶವು ಮುಂದಿನ ಎರಡು ವರ್ಷಗಳಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2047ರ ವೇಳೆಗೆ ನಾಲ್ಕು ಲ.ಕೋ.ಡಾಲರ್‌ಗಳ ಆರ್ಥಿಕತೆಯಿಂದ 30 ಲ.ಕೋ.ಡಾಲರ್‌ಗಳ ಆರ್ಥಿಕತೆಯಾಗಿ ಬೆಳೆಯಲಿದೆ ಎಂದರು.

ಕಳೆದ 11 ವರ್ಷಗಳಲ್ಲಿಯ ಉಪಕ್ರಮಗಳಿಗೆ ಪೂರಕವಾಗಿ ನಿನ್ನೆಯ ಜಿಎಸ್‌ಟಿಯ ಪರೋಕ್ಷ ತೆರಿಗೆಗಳಲ್ಲಿಯ ಸುಧಾರಣೆಯು ಪರಿವರ್ತನಾಶೀಲ ಸ್ವರೂಪದ್ದಾಗಿದೆ. ಇದು ಔಷಧಿ ವಲಯದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಲಿದೆ. ಕೃಷಿಯಿಂದ ಹಿಡಿದು ಎಂಎಸ್‌ಎಂಇಗಳವರೆಗೆ ಹಲವಾರು ಕ್ಷೇತ್ರಗಳ ಮೇಲೆ ಮಹತ್ವದ ಪರಿಣಾಮವನ್ನುಂಟು ಮಾಡಲಿದೆ ಎಂದು ಹೇಳಿದ ಗೋಯಲ್,ದೇಶದ ಪ್ರತಿಯೊಬ್ಬ ಪಾಲುದಾರರು,ಪ್ರತಿಯೊಬ್ಬ ಗ್ರಾಹಕರು ಜಿಎಸ್‌ಟಿ ಕಡಿತದ ಲಾಭವನ್ನು ಪಡೆಯಲಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News