×
Ad

ಅಪರಾಧಿ ಪ್ರಜ್ಞೆಯ ಕಟ್ಟೆಯೊಡೆಯಿತು...

Update: 2025-07-04 21:03 IST

ಸಾಂದರ್ಭಿಕ ಚಿತ್ರ

ಕೊಯಿಕ್ಕೋಡ್: 1986ರಲ್ಲಿ ನಡೆದಿರುವ ಕೊಲೆಯ ಬಗ್ಗೆ ಸುಮಾರು ನಾಲ್ಕು ದಶಕಗಳ ಬಳಿಕ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಆಗಮಿಸಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

39 ವರ್ಷಗಳ ಕಾಲ ಈ ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದ ಮುಹಮ್ಮದಾಲಿಗೆ ಇನ್ನೆಂದೂ ತಾನು ಇದನ್ನು ಸಹಿಸಿಕೊಳ್ಳಲಾರೆ ಅನಿಸಿತು. ಶುಕ್ರವಾರ ಮಲಪ್ಪುರಮ್ ಜಿಲ್ಲೆಯ ವೆಂಗರದಲ್ಲಿರುವ ಪೊಲೀಸ್ ಠಾಣೆಗೆ ಹೋದ ಅವರು, ಹದಿಹರಯದವರಾಗಿದ್ದಾಗ ನಡೆಸಿದ್ದಾರೆ ಎನ್ನಲಾದ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡರು.

ತಾನು 14 ವರ್ಷದವನಿದ್ದಾಗ ಈ ಕೊಲೆಯನ್ನು ಮಾಡಿದೆ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ.

ಕೋಯಿಕ್ಕೋಡ್ ಜಿಲ್ಲೆಯ ತಿರುವಂಬಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೂಡರಂಜಿ ಎಂಬ ಗ್ರಾಮದಲ್ಲಿ ದೇವಸ್ಯ ಎಂಬವರ ಜಮೀನಿನಲ್ಲಿ ಮುಹಮ್ಮದಾಲಿ ಕೆಲಸ ಮಾಡುತ್ತಿದ್ದರು.

ಒಂದು ದಿನ, ವ್ಯಕ್ತಿಯೊಬ್ಬರು ತನಗೆ ಕಿರುಕುಳ ನೀಡಿದರು. ಆಗ ಸ್ವರಕ್ಷಣೆಗಾಗಿ ನಾನು ಆ ವ್ಯಕ್ತಿಗೆ ತುಳಿದೆ. ಆಗ ಆ ವ್ಯಕ್ತಿ ಸಮೀಪದ ನೀರಿನ ಹಳ್ಳಕ್ಕೆ ಬಿದ್ದರು ಎಂದು ಅವರು ಹೇಳಿದರು.

‘‘ಗಾಬರಿಯಾದ ನಾನು ಅಲ್ಲಿಂದ ಓಡಿದೆ. ಎರಡು ದಿನಗಳ ಬಳಿಕ ನಾನು ಅಲ್ಲಿಗೆ ಮರಳಿದೆ. ಆ ವ್ಯಕ್ತಿಯ ನಿರ್ಜೀವ ದೇಹ ಇನ್ನೂ ಹಳ್ಳದ ನೀರಿನಲ್ಲೇ ಇತ್ತು. ನಾನು ಹೆದರಿ ಬಾಯಿ ಬಿಡಲಿಲ್ಲ’’ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮುಹಮ್ಮದಾಲಿ ಹೇಳಿದ್ದಾರೆ.

ಆ ಸಮಯದಲ್ಲಿ ಪೊಲೀಸರು ಈ ಸಾವನ್ನು ಸಹಜ ಸಾವು ಎಂಬುದಾಗಿ ಪರಿಗಣಿಸಿದ್ದರು. ಆ ವ್ಯಕ್ತಿಗೆ ಫಿಟ್ಸ್ ಇತ್ತು ಎಂದು ಸ್ಥಳೀಯರು ಹೇಳಿದ್ದರು. ಆ ವ್ಯಕ್ತಿಯನ್ನು ಯಾರೂ ಗುರುತಿಸಲಿಲ್ಲ. ಯಾವುದೇ ಸುಳಿವು ಸಿಗದೆ ಪ್ರಕರಣವು ಮರೆಗೆ ಸರಿಯಿತು.

ಆದರೆ, ಮುಹಮ್ಮದಾಲಿ ಅದರ ನೆನಪಿನಲ್ಲೇ ಬದುಕಿದರು. ‘‘ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ನನ್ನ ಕುಟುಂಬದಲ್ಲೇ ದುರಂತಗಳು ಸಂಭವಿಸಿದಾಗ ಅಪರಾಧಿ ಪ್ರಜ್ಞೆ ಕಟ್ಟೆಯೊಡೆಯಿತು’’ ಎಂದು 53 ವರ್ಷ ವಯಸ್ಸಿನ ಅವರು ಪೊಲೀಸರಿಗೆ ತಿಳಿಸಿದರು.

ಅವರ ಹಿರಿಯ ಮಗ ಮೃತಪಟ್ಟರು ಮತ್ತು ಕಿರಿಯ ಮಗ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡರು. ‘‘ಕುಟುಂಬಕ್ಕಾದ ಹೊಡೆತಗಳ ಬಳಿಕ ನನಗೆ ನೆಮ್ಮದಿಯಿಂದ ಮಲಗಲು ಸಾಧ್ಯವಾಗಿಲ್ಲ. ನಾನು ಪರಿಶುದ್ಧನಾಗಿ ಹೊರಬರಬೇಕೆಂದು ಅನಿಸಿದೆ’’ ಎಂದು ಮುಹಮ್ಮದಾಲಿ ಹೇಳಿದರು.

ಪೊಲೀಸರು ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಅವರು ಪೊಲೀಸರನ್ನು ಕರೆದೊಯ್ದಿದ್ದಾರೆ. ಈಗ ಮೃತನ ಗುರುತು ಪತ್ತೆಹಚ್ಚುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ. ಅದಕ್ಕಾಗಿ ಹಳೆಯ ಕಡತಗಳು ಮತ್ತು ಪತ್ರಿಕಾ ವರದಿಗಳನ್ನು ಹುಡುಕುತ್ತಿದ್ದಾರೆ.

ಪೊಲೀಸರು ಈಗ ಮುಹಮ್ಮದಾಲಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News