Gujarat | ನಿರ್ಮಾಣ ಹಂತದ ಸೇತುವೆ ಕುಸಿತ; ಐವರು ಕಾರ್ಮಿಕರಿಗೆ ಗಾಯ
Photo Credit : ANI
ಹೊಸದಿಲ್ಲಿ,ಡಿ.12: ಗುಜರಾತ್ ನ ವಲ್ಸಾಡ್ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಿರ್ಮಾಣ ಹಂತದ ಸೇತುವೆಯೊಂದು ಕನಿಷ್ಠ ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಔರಂಗಾ ನದಿಗೆ ನಿರ್ಮಿಸಲಾಗುತ್ತಿದ್ದ ಈ ಸೇತುವೆಯ ಕಾಮಗಾರಿಯನ್ನು ರಾಜ್ಯ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಇಲಾಖೆ ವಹಿಸಿತ್ತು. ವಲ್ಸಾಡ್ ಪಟ್ಟಣವನ್ನು ಆಸುಪಾಸಿನ ಹಳ್ಳಿಗಳೊಂದಿಗೆ ಸಂಪರ್ಕಿಸುವುದಕ್ಕಾಗಿ 700 ಮೀಟರ್ ವಿಸ್ತೀರ್ಣದ ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು.
2024ರಲ್ಲಿ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದರ ಪಕ್ಕದಲ್ಲೇ ಹಳೆಯದಾದ ಮತ್ತು ತಗ್ಗಾದ ಸೇತುವೆಯಿದೆ. ಆದರೆ ಆ ಸೇತುವೆ ಶಿಥಿಲಗೊಂಡಿರುವುದಲ್ಲದೆ, ಮಳೆಗಾಲದ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ ಸರಕಾರವು 42 ಕೋಟಿ ರೂ. ವೆಚ್ಚದಲ್ಲಿ ಸೇತುವೆಯ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು ಹಾಗೂ 2026ರ ಜುಲೈಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಇರಿಸಿತ್ತು.
‘‘ಸೇತುವೆಯ ಸ್ತಂಭಗಳ ನಿರ್ಮಾಣ ಪೂರ್ಣಗೊಂಡಿದ್ದು, ಕಾಮಗಾರಿ ಕೆಲಸಕ್ಕಾಗಿ ಸ್ಥಾಪಿಲಾಗಿದ್ದ ಅಟ್ಟಳಿಗೆಗಳನ್ನು ತೆರವುಗೊಳಿಸಿದಿದ್ದಾಗ, ಅವು ಕುಸಿದಿವೆ. ಇದರಿಂದಾಗಿ ಸೇತುವೆಯ ಎರಡು ಸ್ತಂಭಗಳ ನಡುವಿನ ಪ್ರದೇಶಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಲ್ಸಾಡ್ ಜಿಲ್ಲಾಧಿಕಾರಿ ಭವ್ಯ ವರ್ಮಾ ತಿಳಿಸಿದ್ದಾರೆ.
ಈ ಸೇತುವೆಯ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರಾಯಲ್ ಇಂಜಿನಿಯರಿಂಗ್ ಇನ್ಫ್ರಾ ಸಂಸ್ಥೆಗೆ ನೀಡಲಾಗಿತ್ತು. ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದ್ದು, ವರದಿಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.