×
Ad

Gujarat | ನ್ಯಾಯಾಲಯಗಳನ್ನು ಗಾಬರಿಗೊಳಿಸಿದ ಬಾಂಬ್ ಬೆದರಿಕೆ ಇಮೇಲ್‌

Update: 2026-01-06 22:20 IST

 ಸಾಂದರ್ಭಿಕ ಚಿತ್ರ | Photo Credit : PTI 

ಅಹ್ಮದಾಬಾದ್, ಜ. 6: ರಾಜ್ಯಾದ್ಯಂತ ನ್ಯಾಯಾಲಯಗಳ ಆವರಣದಲ್ಲಿ ಆರ್‌ಡಿಎಕ್ಸ್ ಸ್ಫೋಟಿಸಲಾಗುವುದು ಎಂದು ಎಚ್ಚರಿಸಿದ ಇಮೇಲ್‌ಗಳನ್ನು ಸ್ವೀಕರಿಸಿದ ಬಳಿಕ ಗುಜರಾತ್‌ ನ ಹಲವು ನ್ಯಾಯಾಲಯಗಳು ಮಂಗಳವಾರ ಗಾಬರಿಗೊಂಡವು.

ಸೂರತ್‌ ನಿಂದ ರಾಜ್‌ಕೋಟ್, ಅಹ್ಮದಾಬಾದ್‌ನಿಂದ ಭರೂಚದವರೆಗೆ ನ್ಯಾಯಾಲಯಗಳಲ್ಲಿ ಆತಂಕ ಮೂಡಿತು.

ಎಲ್‌ಟಿಟಿಇ ಹಾಗೂ ಐಎಸ್‌ಕೆಪಿಯೊಂದಿಗೆ ನಂಟು ಹೊಂದಿರುವುದಾಗಿ ಪ್ರತಿಪಾದಿಸಿ ಇಮೇಲ್ ಮೂಲಕ ಬೆದರಿಕೆ ಒಡ್ಡಲಾಗಿದ್ದು, ಜನರ ಸ್ಥಳಾಂತರ, ನ್ಯಾಯಾಲಯದ ಕಾರ್ಯಚಟುವಟಿಕೆಗಳ ಸ್ಥಗಿತ ಹಾಗೂ ರಾಜ್ಯಾದ್ಯಂತ ಭದ್ರತಾ ಪರಿಶೀಲನೆಗೆ ಕಾರಣವಾಯಿತು. ಆದರೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ನ್ಯಾಯಾಲಯದ ಆವರಣದಲ್ಲಿ ಆರ್‌ಡಿಎಕ್ಸ್ ಅಳವಡಿಸಿದ ಆತ್ಮಹತ್ಯಾ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಇಮೇಲ್‌ ನಲ್ಲಿ ಎಚ್ಚರಿಸಲಾಗಿದ್ದು, ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಲು ಕಾರಣವಾಯಿತು.

ಎಲ್‌ಟಿಟಿಇ ಹೆಸರಿನಲ್ಲಿ ಜವಾಬ್ದಾರಿ ಹೊತ್ತುಕೊಂಡ ಈ ಇಮೇಲ್, ಕಾಶ್ಮೀರ ಮೂಲದ ಐಎಸ್‌ಕೆಪಿ ಕಾರ್ಯಕರ್ತರು ಹಾಗೂ ಮಾಜಿ ಎಲ್‌ಟಿಟಿಇ ಸದಸ್ಯರೊಂದಿಗೆ ಸಹಯೋಗ ಹೊಂದಿರುವುದಾಗಿ ಪ್ರತಿಪಾದಿಸಿತ್ತು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದವು.

ಸೂರತ್, ಆನಂದ್, ರಾಜ್‌ಕೋಟ್, ಅಹ್ಮದಾಬಾದ್ ಹಾಗೂ ಭರೂಚದ ಕೆಳ ನ್ಯಾಯಾಲಯಗಳನ್ನು ಗುರಿಯಾಗಿರಿಸಲಾಗಿದೆ ಎಂದು ಇಮೇಲ್‌ ನಲ್ಲಿ ಹೇಳಲಾಗಿತ್ತು. ಇದೇ ರೀತಿಯ ಇಮೇಲ್‌ಗಳು ಭರೂಚ ಜಿಲ್ಲಾಧಿಕಾರಿ ಹಾಗೂ ಗಾಂಧಿನಗರ ಜಿಲ್ಲಾಧಿಕಾರಿ ಕಚೇರಿಗಳಿಗೆ ಏಕಕಾಲದಲ್ಲಿ ತಲುಪಿದ್ದವು. ಇದರಿಂದ ಜನರನ್ನು ಕೂಡಲೇ ತೆರವುಗೊಳಿಸಲಾಗಿದ್ದು, ಲಾಕ್‌ಡೌನ್ ರೀತಿಯ ಕ್ರಮಗಳನ್ನು ಕೈಗೊಳ್ಳಲಾಯಿತು.

ಸೂರತ್‌ ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಸಿದ ಇಮೇಲ್ ಅನ್ನು ಬೆಳಗ್ಗೆ 2 ಗಂಟೆಗೆ ಸ್ವೀಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಲಾಯಿತು. ಪೊಲೀಸರನ್ನು ಕೂಡಲೇ ಕರೆಸಲಾಯಿತು. ನ್ಯಾಯಾಲಯದ ಸಂಕೀರ್ಣವನ್ನು ಭದ್ರತಾ ವಲಯವಾಗಿ ಪರಿವರ್ತಿಸಲಾಯಿತು. ಬಾಂಬ್ ನಿಷ್ಕ್ರಿಯ ದಳ, ಕ್ರೈಮ್ ಬ್ರಾಂಚ್ ಹಾಗೂ ಎಸ್‌ಒಜಿ ತಂಡಗಳು ಪ್ರತಿಯೊಂದು ಕಾರಿಡಾರ್, ನ್ಯಾಯಾಲಯದ ಕೊಠಡಿ ಹಾಗೂ ಕಚೇರಿಗಳನ್ನು ತಪಾಸಣೆ ನಡೆಸಿದವು. ಅಪರಾಹ್ನದೊಳಗೆ ತಪಾಸಣೆ ಪೂರ್ಣಗೊಂಡಿತು. ಆದರೆ ಯಾವುದೇ ರೀತಿಯ ಸಂಶಯಾಸ್ಪದ ವಸ್ತು ಪತ್ತೆಯಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News