×
Ad

ಸಂಜೀವ್ ಭಟ್ ರ ಜೈಲು ವರ್ಗಾವಣೆ ತಡೆ ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್

ಬಂಧನದ ಸ್ಥಳ ನಿರ್ಧಾರ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದ ನ್ಯಾಯಾಲಯ

Update: 2025-10-28 14:06 IST

ಸಂಜೀವ್ ಭಟ್ (File Photo)

ಅಹಮದಾಬಾದ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್ ಅವರು ಜೈಲು ವರ್ಗಾವಣೆ ತಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿದೆ.

ಬಂಧನದ ಸ್ಥಳವನ್ನು ನಿರ್ಧರಿಸುವ ಹಕ್ಕು ಕೈದಿ ಅಥವಾ ಅವರ ಕುಟುಂಬದವರಿಗಿಲ್ಲ. ಅದು ಸರ್ಕಾರ ಹಾಗೂ ಜೈಲಿನ ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂಜೀವ್ ಭಟ್ ಅವರನ್ನು ಪಾಲನ್‌ಪುರ ಜೈಲಿಗೆ ವರ್ಗಾಯಿಸಿದ್ದು ಕೇವಲ ಎನ್‌ಡಿಪಿಎಸ್ (ಮಾದಕ ವಸ್ತು) ಪ್ರಕರಣದ ವಿಚಾರಣೆಯ ಸಮಯದಲ್ಲಿ ತಾತ್ಕಾಲಿಕ ಕ್ರಮದ ಭಾಗವಾಗಿತ್ತು. ವಿಚಾರಣೆ ಮುಗಿದ ನಂತರ ಅವರನ್ನು ರಾಜ್‌ಕೋಟ್ ಕೇಂದ್ರ ಕಾರಾಗೃಹಕ್ಕೆ ವಾಪಾಸ್ ಕಳುಹಿಸಲಾಯಿತು. ಕಾರಾಗೃಹ ಕೈಪಿಡಿಯ ಪ್ರಕಾರ ಜೀವಾವಧಿ ಶಿಕ್ಷೆ ವಿಧಿಸಿದ ಕೈದಿಗಳಿಗೆ ನಿಗದಿಪಡಿಸಿದ ಕೇಂದ್ರ ಕಾರಾಗೃಹ ರಾಜ್‌ಕೋಟ್ ಆಗಿದೆ.

ಶ್ವೇತಾ ಭಟ್ ಅವರು ಪತಿ ಸಂಜೀವ್ ಭಟ್ ಅವರನ್ನು ಬೇರೆ ಜೈಲಿಗೆ ವರ್ಗಾಯಿಸಬಹುದು ಎಂದು ಆತಂಕ ವ್ಯಕ್ತಪಡಿಸಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರವು “ಜೈಲು ಶಿಕ್ಷೆ ಅನುಭವಿಸುವ ಸ್ಥಳವನ್ನು ಕೈದಿಯು ಆಯ್ಕೆಮಾಡಲು ಅಥವಾ ತಡೆಹಿಡಿಯಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿತು.

ನ್ಯಾಯಾಲಯವು ಸರ್ಕಾರದ ಕ್ರಮದಲ್ಲಿ ಯಾವುದೇ ದುರುದ್ದೇಶಪೂರಿತ ಉದ್ದೇಶ ಕಂಡುಬಂದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. “ಬಂಧನದ ಸ್ಥಳದ ಬಗ್ಗೆ ತೀರ್ಮಾನಿಸುವ ಅಧಿಕಾರ ಜೈಲಿನ ಆಡಳಿತಕ್ಕೆ ಮಾತ್ರ ಇದೆ” ಎಂದು ಪೀಠವು ಅಭಿಪ್ರಾಯಪಟ್ಟಿತು.

ಐಐಟಿ ಮುಂಬೈನ ಪದವೀಧರ ಹಾಗೂ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ವೃತ್ತಿಜೀವನದಲ್ಲಿ ಹಲವಾರು ವಿವಾದಗಳು ಸುತ್ತುವರಿದಿವೆ. 2019ರ ಜೂನ್ 20ರಂದು ಜಾಮ್‌ನಗರ ಸೆಷನ್ಸ್ ನ್ಯಾಯಾಲಯವು 1990ರ ಕಸ್ಟಡಿ ಸಾವಿನ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ನಂತರ 2024ರ ಮಾರ್ಚ್ 27ರಂದು ಬನಾಸ್ಕಂಠ ಸೆಷನ್ಸ್ ನ್ಯಾಯಾಲಯವು ಎನ್‌ಡಿಪಿಎಸ್ ಪ್ರಕರಣದಲ್ಲೂ ಅವರನ್ನು ದೋಷಿ ಎಂದು ತೀರ್ಪು ನೀಡಿತು.

ಒಮ್ಮೆ ಉನ್ನತ ಹುದ್ದೆಯ ಅಧಿಕಾರಿಯಾಗಿದ್ದ ಭಟ್, 2002ರ ಗಲಭೆ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಪಾತ್ರವಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ ಹಿನ್ನೆಲೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಆದರೆ ನಂತರ ವಿಶೇಷ ತನಿಖಾ ತಂಡ (SIT) ಅವರ ಆರೋಪಗಳಿಗೆ ಯಾವುದೇ ಪುರಾವೆ ಸಿಕ್ಕಿಲ್ಲವೆಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News