ED ಅಧಿಕಾರಿಗಳಿಂದ ಬಂಧಿತ ಗುಜರಾತ್ ಸಮಾಚಾರ್ ದಿನಪತ್ರಿಕೆಯ ಮಾಲಕ ಬಾಹುಬಲಿ ಶಾ ಅವರಿಗೆ ತಾತ್ಕಾಲಿಕ ಜಾಮೀನು
ಬಾಹುಬಲಿ ಶಾ (Photo: thesouthfirst.com)
ಹೊಸದಿಲ್ಲಿ : ಆರ್ಥಿಕ ವಂಚನೆ ಆರೋಪದಲ್ಲಿ ಬಂಧಿತ 'ಗುಜರಾತ್ ಸಮಾಚಾರ್' ದಿನಪತ್ರಿಕೆಯ ಮಾಲಕ ಬಾಹುಬಲಿ ಶಾ ಅವರಿಗೆ ಅಹಮದಾಬಾದ್ ನ್ಯಾಯಾಲಯ ಮೇ 31ರವರೆಗೆ ತಾತ್ಕಾಲಿಕವಾಗಿ ಜಾಮೀನು ಮಂಜೂರು ಮಾಡಿದೆ.
ಅಹಮದಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ಸೋಜಿತ್ರ ಅವರು ಬಾಹುಬಲಿ ಶಾ ಅವರನ್ನು ವೈದ್ಯಕೀಯ ಕಾರಣಗಳಿಂದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದರು.
10,000ರೂ.ಗಳ ವೈಯಕ್ತಿಯ ಬಾಂಡ್, ತನಿಖಾ ಸಂಸ್ಥೆಗೆ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿ ಎರಡು ದಿನಗಳಿಗೊಮ್ಮೆ ತಿಳಿಸಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನ ಮೇಲೆ ಸೆಷನ್ಸ್ ನ್ಯಾಯಾಲಯ ಬಾಹುಬಲಿ ಶಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಕುರಿತ ಅರ್ಜಿಯ ಮುಂದಿನ ವಿಚಾರಣೆ ಮೇ.31ಕ್ಕೆ ಮುಂದೂಡಲಾಗಿದೆ.
ಗುಜರಾತ್ ಸಮಾಚಾರ್ ಪತ್ರಿಕೆಯ ಮಾಲಕತ್ವವನ್ನು ಹೊಂದಿರುವ ಲೋಕ್ ಪ್ರಕಾಶನ್ ಲಿಮಿಟೆಡ್‌ನ ನಿರ್ದೇಶಕರಲ್ಲಿ ಬಾಹುಬಲಿ ಶಾ ಓರ್ವರು. ಅವರ ಹಿರಿಯ ಸಹೋದರ ಶ್ರೇಯಂಶ್ ಶಾ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ಬಂಧನದ ನಂತರ ಶಾ ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.