×
Ad

ಗುಜರಾತ್: ಈಸ್ಟರ್ ಪ್ರಾರ್ಥನಾ ಸಭೆಗೆ ನುಗ್ಗಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರ ದಾಂಧಲೆ

Update: 2025-04-21 07:30 IST

ಅಹ್ಮದಾಬಾದ್: ಜಿಲ್ಲೆಯ ಓಧವ್ ಎಂಬಲ್ಲಿ ಪ್ರೊಟಸ್ಟಂಟ್ ಕ್ರಿಶ್ಚಿಯನ್ನರು ಈಸ್ಟರ್ ಸಂಡೇ ಸಂದರ್ಭಲ್ಲಿ ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ದಾಂಧಲೆ ಎಬ್ಬಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಡಿಗೆ ಮತ್ತು ಲಾಠಿಗಳನ್ನು ಹಿಡಿದಿದ್ದ ಕಾರ್ಯಕರ್ತರು, ಹರ ಹರ ಮಹಾದೇವ್ ಮತ್ತು ಜೈಶ್ರೀರಾಂ ಘೋಷಣೆಗಳನ್ನು ಕೂಗುತ್ತಾ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಪ್ರದೇಶಕ್ಕೆ ನುಗ್ಗಿದರು. ಪ್ರಾರ್ಥನಾ ನಿರತರಾಗಿದ್ದ ಮಹಿಳೆಯರನ್ನು ಸಭೆಯಿಂದ ಹೊರ ನಡೆಯುವಂತೆ ಆಗ್ರಹಿಸುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.

ಎಕ್ಸ್ ನಲ್ಲಿ ಪೋಸ್ಟ್ ಆದ ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾಜ್ಯ ಪೊಲೀಸ್ ಮುಖ್ಯಸ್ಥರು, ಅಹ್ಮದಾಬಾದ್ ನಗರ ಪೊಲೀಸರು ಇದಕ್ಕೆ ಪ್ರತಿಕ್ರಿಯಿಸಿ, ಘಟನೆಯನ್ನು ದೃಢಪಡಿಸಿದ್ದಾರೆ. "ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂಬ ಅನುಮಾನದಿಂದ ವಿಎಚ್‌ಪಿ ಕಾರ್ಯಕರ್ತರು ಪ್ರಾರ್ಥನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ, ಇದಾದ ಸ್ವಲ್ಪವೇ ಹೊತ್ತಿನಲ್ಲಿ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ. ವಿಎಚ್‌ಪಿ ಕಾರ್ಯಕರ್ತರು ಓಧವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮನವಿಯನ್ನೂ ಸಲ್ಲಿಸಿ, ಧಾರ್ಮಿಕ ಮತಾಂತರ ವಿರುದ್ಧ ಆತಂಕ ವ್ಯಕ್ತಪಡಿಸಿದ್ದಾರೆ. ಅಪಹರಣ ಅಥವಾ ಒತ್ತೆಯಾಳುಗಳಾಗಿ ಒಯ್ದಿರುವ ಯಾವ ಘಟನೆಯೂ ನಡೆದಿಲ್ಲ. ಯಾವುದೇ ಸಂಘರ್ಷ ಅಥವಾ ಅನಪೇಕ್ಷಿತ ಘಟನೆಗಳು ನಡೆದಿಲ್ಲ" ಎಂದು ಅಹ್ಮದಾಬಾದ್ ನಗರ ಪೊಲೀಸರು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ವಿಮಲ್ ಪ್ರಕಾಶ್ ಸೊಸೈಟಿ‌ ಸಮೀಪದ ರಾಜೇಂದ್ರ ಪಾರ್ಕ್ ನಲ್ಲಿ ಆಯೋಜಿಸಿದ್ದ ಈಸ್ಟರ್ ಸಮಾವೇಶದ ವೇಳೆ ಈ ಘಟನೆ ನಡೆದಿದೆ ಎಂದು ಇನ್ಸ್ಪೆಕ್ಟರ್ ಪ್ರತೀಕ್ ಜಿಂಜುವಾಡಿಯಾ ಹೇಳಿದ್ದಾರೆ. ಈ ಘಟನೆ ಸಂಬಂಧ ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News