×
Ad

ಗೋವಿಗೆ ಚಿಕನ್ ಮೊಮೊಸ್ ತಿನ್ನಿಸಿದ ಆರೋಪ| ಯುವಕನನ್ನು ಥಳಿಸಿ ಮೆರವಣಿಗೆ: ವೈರಲ್ ವೀಡಿಯೊ ಆಧಾರದಲ್ಲಿ ಎಫ್‌ಐಆರ್

Update: 2025-12-10 13:25 IST

Photo| timesofindia

ಗುರುಗ್ರಾಮ: ಗೋವಿಗೆ ಚಿಕನ್ ಮೊಮೊಸ್ ತಿನ್ನಿಸಿದ ಆರೋಪದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, 28 ವರ್ಷದ ಯುವಕನನ್ನು ಬಜರಂಗದಳಕ್ಕೆ ಸೇರಿದ ವ್ಯಕ್ತಿಗಳು ಥಳಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನ್ಯೂ ಕಾಲೋನಿಯಲ್ಲಿ ವಾಸಿಸುವ ರಿತಿಕ್ ಎಂಬ ಯುವಕನು ರವಿವಾರ ಪ್ರಿಸಂ ಆಪ್‌ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ವೇಳೆ ವಿವಾದಕ್ಕೆ ಕಾರಣವಾದ ದೃಶ್ಯಗಳು ದಾಖಲಾಗಿದ್ದವು. ವೀಡಿಯೊದಲ್ಲಿ, ಮೊದಲು ಮೊಮೊಸ್ ನಲ್ಲಿ ಚಿಕನ್ ಇದೆ ಎಂಬುದನ್ನು ಮಾರಾಟಗಾರರಿಂದ ದೃಢೀಕರಿಸಿಕೊಂಡ ರಿತಿಕ್, ಚಾಲೆಂಜ್ ನ ಭಾಗವಾಗಿ ಅವನ್ನು ತಿನ್ನಲು ಪ್ರಯತ್ನಿಸುತ್ತಾನೆ. ಬಳಿಕ ಉಳಿದ ಮೊಮೊಸ್ ಗಳನ್ನು ಹತ್ತಿರದಲ್ಲಿದ್ದ ಗೋವಿಗೆ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋವನ್ನು ಬಜರಂಗದಳ ಸದಸ್ಯನೆಂದು ಪರಿಚಯಿಸಿಕೊಂಡಿರುವ ಚಮನ್ ಖತಾನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸ್ಥಳೀಯ ಸ್ವಗೋಷಿತ ಗೋಸಂರಕ್ಷಣಾ ಗುಂಪುಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಖತಾನಾ ಮತ್ತು ಇನ್ನಿತರರು ರಿತಿಕ್ ಮನೆಗೆ ತೆರಳಿ, ಆತನ ತಂದೆಯೊಂದಿಗೆ ವಾಗ್ವಾದ ನಡೆಸಿದ ದೃಶ್ಯಗಳನ್ನು ಚಿತ್ರೀಕರಿಸಿದರು. ಹೊರಬಂದ ಬಳಿಕ ಖತಾನಾ, ರಿತಿಕ್ ತಂದೆಯನ್ನು ಗದರಿಸುತ್ತಾ, ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿರುವುದು ಹಾಗೂ ಮಗನನ್ನು ಹೊಡೆಯುವುದಾಗಿ ಬೆದರಿಸುವುದು ವೀಡಿಯೊದಲ್ಲಿ ಕಂಡು ಬರುತ್ತದೆ.  

ನಂತರ ರಿತಿಕ್‌ ನನ್ನು ಮನೆಯಿಂದ ಹೊರಗೆ ಕರೆದು ತಂದೆಯೊಂದಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿಸಿ, ಘಟನೆಯ ಬಗ್ಗೆ ಕ್ಯಾಮೆರಾ ಮುಂದೆ ಪ್ರಶ್ನಿಸುವುದು ವೀಡಿಯೊಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಈ ವೇಳೆಯಲ್ಲಿ, ರಿತಿಕ್ ಲೈವ್ ಸ್ಟ್ರೀಮ್ ಮೂಲಕ ಹಣ ಹೇಗೆ ಸಂಪಾದಿಸುತ್ತಾನೆಯೇ ಎಂಬುದರ ಕುರಿತ ಪ್ರಶ್ನೆಗಳು ಕೂಡ ಕೇಳಿಬಂದಿವೆ.

ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ ಪೊಲೀಸರು ರಿತಿಕ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ. ಜಾಮೀನು ಪಡೆದಿರುವ ರಿತಿಕ್‌ ರ ಮೇಲಿನ ದಾಳಿಯ ಕುರಿತು ಪೊಲೀಸರು ಪ್ರತ್ಯೇಕವಾಗಿ ತನಿಖೆ ಪ್ರಾರಂಭಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News