ಗುರುಗ್ರಾಮ | ನಾಲ್ಕು ವರ್ಷದ ಬಾಲಕನ ಮೇಲೆ ಕಾರು ಹರಿಸಿದ ವೈದ್ಯ; ಬಂಧನ
Update: 2025-09-20 21:36 IST
ಸಾಂದರ್ಭಿಕ ಚಿತ್ರ
ಗುರುಗ್ರಾಮ: ಸೆಪ್ಟೆಂಬರ್ 15ರಂದು ಗುರುಗ್ರಾಮದ ಸೂರತ್ ನಗರ್ 2ನೇ ಹಂತದಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಸರಕಾರಿ ವೈದ್ಯರೊಬ್ಬರನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಹಿತೇಶ್ ಶರ್ಮ ಎಂದು ಗುರುತಿಸಲಾಗಿದ್ದು, ಆತನನ್ನು ಶುಕ್ರವಾರ ಬಂಧಿಸಲಾಗಿದೆ. ಜೊತೆಗೆ ಆತನ ಕಾರನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಬಾಲಕನು ತನ್ನ ಮನೆಯ ಮುಂದೆ ಆಟ ಆಡುವಾಗ ಈ ಘಟನೆ ನಡೆದಿದ್ದು, ಹಿತೇಶ್ ಶರ್ಮ ಚಲಾಯಿಸುತ್ತಿದ್ದ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಆತನ ಮೇಲೆ ಹರಿದಿದೆ ಎಂದು ಆರೋಪಿಸಲಾಗಿದೆ.
ಈ ದೂರನ್ನು ಆಧರಿಸಿ, ಕಾರು ಚಾಲಕನ ವಿರುದ್ಧ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಶುಕ್ರವಾರ ಕಾರು ಚಾಲಕ ಹಿತೇಶ್ ಶರ್ಮನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.