ಮಾನಸಾ ದೇವಿ ಮಂದಿರ ಕಾಲ್ತುಳಿತ | ಗಾಯಾಳು ಮಹಿಳೆ ನಿಧನ: ಮೃತರ ಸಂಖ್ಯೆ 9ಕ್ಕೇರಿಕೆ
Photo Credit: ANI
ಡೆಹ್ರಾಡೂನ್,ಜು.30: ಉತ್ತರಾಖಂಡದ ಹರಿದ್ವಾರದ ಮಾನಸಾ ದೇವಿ ದೇವಸ್ಥಾನದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಇನ್ನೋರ್ವ ಮಹಿಳೆ ಬುಧವಾರ ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರೊಂದಿಗೆ ರವಿವಾರ ಸಂಭವಿಸಿದ್ದ ಈ ದುರಂತದಲ್ಲಿ ಸಾವುಗಳ ಸಂಖ್ಯೆ ಒಂಭತ್ತಕ್ಕೇರಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಮಹಿಳೆಯ ಸಾವನ್ನು ಹರಿದ್ವಾರ ಜಿಲ್ಲಾಧಿಕಾರಿಗಳು ದೃಢಪಡಿಸಿದ್ದಾರೆ.
ಏಮ್ಸ್ ಅಧಿಕಾರಿಗಳ ಪ್ರಕಾರ ಈಗಲೂ ಐವರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು ಉತ್ತರ ಪ್ರದೇಶದ ರಾಮಪುರ ನಿವಾಸಿ ಮಹಿಳೆ ಮತ್ತು ಆಕೆಯ ನಾಲ್ಕು ವರ್ಷ ಪ್ರಾಯದ ಮಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದ್ದರೆ, ಇತರ ಇಬ್ಬರಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಓರ್ವ ಗಾಯಾಳು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿದ ಪಾರಾಗಿದ್ದಾನೆ.
ರವಿವಾರ ವಿದ್ಯುತ್ ಆಘಾತದ ವದಂತಿಯಿಂದಾಗಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು 45 ಜನರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ 15 ಜನರನ್ನು ಏಮ್ಸ್ ಗೆ ದಾಖಲಿಸಲಾಗಿದ್ದು,ಈ ಪೈಕಿ ಒಂಭತ್ತು ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.