ಹರ್ಯಾಣ: ಕತ್ತು ಸೀಳಿದ ಸ್ಥಿತಿಯಲ್ಲಿ ರೂಪದರ್ಶಿಯ ಮೃತದೇಹ ಕಾಲುವೆಯಲ್ಲಿ ಪತ್ತೆ
PC : NDTV
ಚಂಡಿಗಢ: ಹರ್ಯಾಣ ಮೂಲದ ರೂಪದರ್ಶಿ ಶೀತಲ್ ಆಲಿಯಾಸ್ ಸಿಮ್ಮಿ ಅವರು ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣದ ಸೋನಿಪತ್ ಜಿಲ್ಲೆಯ ಖಾರ್ಖೋಡ ಪ್ರದೇಶದ ಕಾಲವೆಯಲ್ಲಿ ರವಿವಾರ ಪತ್ತೆಯಾಗದೆ.
ಮ್ಯೂಸಿಕ್ ವೀಡಿಯೊ ಚಿತ್ರೀಕರಣಕ್ಕಾಗಿ ಶೀತಲ್ ಪಾಣಿಪತ್ನ ತನ್ನ ಮನೆಯಿಂದ ಎರಡು ದಿನಗಳ ಹಿಂದೆ ತೆರಳಿದ್ದರು. ಆದರೆ, ಹಿಂದಿರುಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶೀತಲ್ ಹರ್ಯಾಣದ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದರು. ಇದಕ್ಕಿಂತ ಮುನ್ನ ಅವರು ಕರ್ನಲ್ನಲ್ಲಿರುವ ಹೊಟೇಲ್ನಲ್ಲಿ ಉದ್ಯೋಗಿಯಾಗಿದ್ದರು. ಆಕೆ ತನ್ನ ಸಹೋದರಿ ನೇಹಾ ಅವರೊಂದಿಗೆ ಪಾಣಿಪತ್ ನಲ್ಲಿ ವಾಸಿಸುತ್ತಿದ್ದರು.
‘‘ಕಾಲುವೆಯಲ್ಲಿ ಯುವತಿಯ ಮೃತದೇಹ ಇರುವ ಬಗ್ಗೆ ಪೊಲೀಸರು ಮಾಹಿತಿ ಸ್ವೀಕರಿಸಿದ್ದರು. ಅನಂತರ ಆ ಮೃತದೇಹವನ್ನು ಶೀತಲ್ ಅವರದ್ದು ಎಂದು ಗುರುತಿಸಿದ್ದರು. ಶೀತಲ್ ಕಾಣೆಯಾಗಿರುವ ಬಗ್ಗೆ ಪಾನಿಪತ್ ನಲ್ಲಿ ಪೊಲೀಸ್ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತನಿಖೆ ಮುಂದುವರಿದಿದೆ’’ ಎಂದು ಸೋನಿಪತ್ ಖಾರ್ಖೋಡದ ಎಸಿಪಿ ಜೀತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.