×
Ad

ಉದ್ಯೋಗ ನೇಮಕಾತಿ ಹಗರಣ | ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಸಾಗರೋತ್ತರ ಉದ್ಯೋಗಗಳ ಅಮಿಷ: ವರದಿ

Update: 2025-06-15 22:21 IST

ಸಾಂದರ್ಭಿಕ ಚಿತ್ರ

ಚಂಡೀಗಢ: ವಿದೇಶಗಳಲ್ಲಿ ಉತ್ತಮ ಭವಿಷ್ಯಕ್ಕಾಗಿ ಅರಸುತ್ತಿರುವ ಪಂಜಾಬ್, ಹರ್ಯಾಣ ಹಾಗೂ ಚಂಡೀಗಢದ ಯುವಕರು ನಕಲಿ ಸಾಗರೋತ್ತರ ಉದ್ಯೋಗಗಳ ಆಮಿಷ ಒಡ್ಡುತ್ತಿರುವ ವಂಚಕರು ಹಾಗೂ ನೋಂದಣಿಗೊಳ್ಳದ ಸಂಸ್ಥೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಈ ಸಂಸ್ಥೆಗಳು ರಷ್ಯ, ಅರ್ಮೇನಿಯಾ, ಜಾರ್ಜಿಯಾ, ಜೋರ್ಡಾನ್, ಅಝರ್‌ ಬೈಜಾನ್, ಚಿಲಿ, ಮೆಕ್ಸಿಕೊ, ದುಬೈ, ಲಕ್ಸೆಂಬರ್ಗ್, ಕಾಂಬೋಡಿಯಾ, ಥಾಯ್ಲೆಂಡ್, ಕ್ರೊಯೇಷಿಯಾ, ಲಿಥುವನಿಯ, ಪೋರ್ಚುಗಲ್ ಹಾಗೂ ಕುವೈತ್‌ ಗಳಲ್ಲಿ ಉದ್ಯೋಗದ ಆಮಿಷವೊಡ್ಡುತ್ತಿವೆ ಎನ್ನಲಾಗಿದೆ.

ಹೊಸ ಟ್ರೆಂಡ್ ಪ್ರಕಾರ, ಈ ವಂಚಕ ಸಂಸ್ಥೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜಾಹೀರಾತುಗಳನ್ನು ಹಂಚುವ ಮೂಲಕ, ನಿರುದ್ಯೋಗಿ ಯುವಕರಿಗೆ ಆಮಿಷವೊಡ್ಡಿ, ಅವರನ್ನು ಬಲೆಗೆ ಬೀಳಿಸಿಕೊಳ್ಳುತ್ತಿವೆ. ನಂತರ, ಟೆಲಿಕಾಲರ್‌ ಗಳು ಅವರ ಮನವೊಲಿಸುತ್ತಾರೆ. ಒಮ್ಮೆ ಅವರು ಈ ಆಹ್ವಾನವನ್ನು ಒಪ್ಪಿದರೆ, ನಂತರ ಅವರು ನಮಗೆ ವಂಚನೆಯಾಗಿದೆ ಎಂದು ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನೆ ಮಾಡಲು ಸಾಧ್ಯವಾಗದಂತಹ ಕಾನೂನಾತ್ಮಕ ಒಪ್ಪಂದವೊಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ.

ಈ ಕುರಿತು ಮಾತನಾಡಿರುವ ಚಂಡೀಗಢದ ವಲಸಿಗರ ಹಿತ ರಕ್ಷಕ ಯಶು ದೀಪ್ ಸಿಂಗ್, ನಕಲಿ ಸಾಗರೋತ್ತರ ಉದ್ಯೋಗ ಆಮಿಷಗಳನ್ನು ಒಡ್ಡುವ ಮೂಲಕ, ವಂಚಕರು ಹಾಗೂ ನೋಂದಣಿಗೊಳ್ಳದ ಸಂಸ್ಥೆಗಳು ಭಾರತೀಯ ಪ್ರಜೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.

"ಕಳೆದ ಒಂದು ವರ್ಷದಲ್ಲಿ ನಾವು ಅಕ್ರಮ ಸಾಗರೋತ್ತರ ಉದ್ಯೋಗಗಳಿಗೆ ಸಂಬಂಧಿಸಿದ ಒಟ್ಟು 52 ದೂರುಗಳು ಹಾಗೂ ಮಾಹಿತಿಗಳನ್ನು ಚಂಡೀಗಢ ಪೊಲೀಸ್ ಇಲಾಖೆಯ ನೋಡಲ್ ಅಧಿಕಾರಿಯೊಂದಿಗೆ ಹಂಚಿಕೊಂಡಿದ್ದೇವೆ. ಈ ಪ್ರಯತ್ನಗಳಿಂದಾಗಿ, ಚಂಡೀಗಢ ಪೊಲೀಸರು ಅಕ್ರಮ ಸಂಸ್ಥೆಗಳ ವಿರುದ್ಧ 13 ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲು ಕಾರಣವಾಯಿತು. ಇದರೊಂದಿಗೆ, ವಲಸೆ ಕಾಯ್ದೆ, 1983ರ ಅಡಿ ಸಾಗರೋತ್ತರ ಉದ್ಯೋಗಗಳು, ಉದ್ಯೋಗ ವೀಸಾಗಳು ಹಾಗೂ ಸೂಕ್ತ ಮಾನ್ಯತೆಯೊಂದಿಗೆ ಉದ್ಯೋಗ ಪರವಾನಗಿ ಕೊಡಿಸಲಾಗುವುದು ಎಂಬ ಜಾಹೀರಾತು ನೀಡಿರುವ ಚಂಡೀಗಢ ಮೂಲದ ನೋಂದಣಿಗೊಳ್ಳದ ಸಂಸ್ಥೆಗಳಿಗೆ 32 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

"ಅದು ಫೇಸ್‌ಬುಕ್ ಆಗಿರಲಿ, ಇನ್ಸ್ಟಾಗ್ರಾಮ್ ಆಗಿರಲಿ ಅಥವಾ ವಾಟ್ಸ್ ಆ್ಯಪ್ ಆಗಿರಲಿ, ವಿದೇಶಗಳಲ್ಲಿ ಉದ್ಯೋಗ ಒದಗಿಸಲಾಗುವುದು ಎಂದು ಅನಧಿಕೃತ ಪ್ರವಾಸಿ ಏಜೆಂಟ್‌ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಾರೆ" ಎಂದು ಹೇಗೆ ನಕಲಿ ಸಾಗರೋತ್ತರ ಉದ್ಯೋಗಗಳ ಜಾಲ ಯುವಕರನ್ನು ವಂಚಿಸುತ್ತಿದೆ ಎಂಬ ಪ್ರಶ್ನೆಯ ಕುರಿತು ಯಶು ದೀಪ್ ಸಿಂಗ್ ವಿವರಿಸಿದ್ದಾರೆ.

"ಈ ಜಾಹೀರಾತುಗಳಲ್ಲಿ ಯಾವುದೇ ವಿಳಾಸ ನೀಡಿರದೆ ಇರುವುದರಿಂದ, ಅವರು ಒದಗಿಸಿರುವ ಮೊಬೈಲ್ ಸಂಖ್ಯೆಯನ್ನು ಯುವಕರು ಸಂಪರ್ಕಿಸುತ್ತಾರೆ. ಒಮ್ಮೆ ಅವರು ಅವರ ಜಾಲಕ್ಕೆ ಬಿದ್ದರೆ, ಅವರನ್ನು ಪದೇ ಪದೇ ಸಂಪರ್ಕಿಸುವ ಟೆಲಿಕಾಲರ್‌ ಗಳು ಅವರಿಗೆ ಉಜ್ವಲ ಭವಿಷ್ಯ ಹಾಗೂ ಉತ್ತಮ ಪ್ಯಾಕೇಜ್‌ ನ ಭರವಸೆ ನೀಡಿ ತಲೆ ಕೆಡಿಸುತ್ತಾರೆ. ಇಂತಹ ಯುವಕರು ಉದ್ಯೋಗಕ್ಕಾಗಿ ಹಣ ಪಾವತಿ ಮಾಡಲು ಸಿದ್ದರಿದ್ದಾರೆ ಎಂಬುದು ಈ ಟೆಲಿಕಾಲರ್‌ ಗಳಿಗೆ ಖಚಿತವಾಗುತ್ತಿದ್ದಂತೆಯೇ, ಮುಂದೆ ಯಾವುದೇ ಕಾನೂನಾತ್ಮಕ ತೊಂದರೆ ಎದುರಾಗುವುದನ್ನು ತಪ್ಪಿಸಿಕೊಳ್ಳಲು, ಸಾಗರೋತ್ತರ ಉದ್ಯೋಗಕ್ಕಾಗಿ ಒಪ್ಪಂದವೊಂದಕ್ಕೆ ಸಹಿ ಮಾಡುವಂತೆ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಳ್ಳುತ್ತಾರೆ. ಒಂದು ವೇಳೆ ಉದ್ಯೋಗ ದೊರೆಯದಿದ್ದರೆ, ಈ ಏಜೆಂಟ್‌ಗಳ ಬಳಿಗೆ ಮರಳಿ ಬರುವ ಯುವಕರು ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಾರೆ. ಹೀಗಾಗಿ, ಯಾವುದೇ ಕಾನೂನಾತ್ಮಕ ಸಮಸ್ಯೆ ಎದುರಾಗುವುದನ್ನು ತಪ್ಪಿಸಿಕೊಳ್ಳಲು ತಾವು ಕಾನೂನಾತ್ಮಕವಾಗಿ ಸುರಕ್ಷಿತವಾಗುವುದನ್ನು ಖಾತರಿಪಡಿಸಿಕೊಳ್ಳಲು ಹಾಗೂ ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲು ಈ ಏಜೆಂಟ್‌ಗಳು ಬಯಸುತ್ತಾರೆ. ಹೀಗಾಗಿ, ತೀರಾ ಹೆಚ್ಚೆಂದರೆ, ಅವರ ವಿರುದ್ಧ ಸಿವಿಲ್ ದಾವೆಯನ್ನು ಮಾತ್ರ ಹೂಡಲು ಸಾಧ್ಯವಾಗುತ್ತದೆ" ಎಂದು ಅವರು ವಂಚಕರ ಜಾಲದ ಕಾರ್ಯಾಚರಣೆ ಕುರಿತು ವಿಸ್ತೃತ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News