ಕಾಂಗ್ರೆಸ್ ಶಾಸಕನ ಬಂಧನದ ನಂತರ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ ನೆಟ್ ಸ್ಥಗಿತಗೊಳಿಸಿದ ಹರ್ಯಾಣ ಸರಕಾರ
Photo: PTI
ಚಂಡಿಗಢ: ನುಹ್ ಜಿಲ್ಲೆಯಲ್ಲಿ ಜು.31ರಂದು ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, 'ತಪ್ಪು ಮಾಹಿತಿ ಹಾಗೂ ವದಂತಿಗಳ ಹರಡುವಿಕೆ' ತಡೆಯಲು ಹರ್ಯಾಣ ಸರಕಾರವು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಹಾಗೂ ಬಲ್ಕ್ ಎಸ್ ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಶುಕ್ರವಾರ ಆದೇಶಿಸಿದೆ. .
ಸರಕಾರ ನುಹ್ ಜಿಲ್ಲೆಯಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನೂ ವಿಧಿಸಿದೆ.
ಕೋಮು ಘರ್ಷಣೆಯ ನಂತರ ಎಫ್ ಐಆರ್ ನಲ್ಲಿ ಆರೋಪಿ ಎಂದು ಹೆಸರಿಸಲಾದ ಫಿರೋಝ್ ಪುರ ಜಿರ್ಕಾ ಶಾಸಕನನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಎಫ್ ಐಆರ್ ನಲ್ಲಿ ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಸೇರಿವೆ.
ಫಿರೋಝ್ ಪುರ ಜಿರ್ಕಾ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಸತೀಶ್ ಕಮಾರ್ ಶಾಸಕನ ಬಂಧನವನ್ನು ಖಚಿತಪಡಿಸಿದ್ದಾರೆ.
ಶಾಸಕ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ನಮಗೆ ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ನುಹ್ ಅಫ್ತಾಬ್ ಅಹ್ಮದ್ ಹೇಳಿದ್ದಾರೆ.