ದಿಲ್ಲಿ ಸ್ಫೋಟದ ಮರುದಿನ ಕೋಲ್ಕತಾದ ಐಎಸ್‌ಐ ಹಾಸ್ಟೆಲ್‌ನಲ್ಲಿ ದ್ವೇಷದ ಬರಹಗಳು ಪ್ರತ್ಯಕ್ಷ : ವರದಿ
Photo Credit : altnews.in
ಕೋಲ್ಕತಾ,ನ.13: ದಿಲ್ಲಿಯ ಕೆಂಪುಕೋಟೆ ಬಳಿ 13 ಜನರ ಪ್ರಾಣಹಾನಿಗೆ ಕಾರಣವಾದ ಕಾರು ಸ್ಫೋಟದ ಮರುದಿನವೇ ಕೋಲ್ಕತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ (ಐಎಸ್‌ಐ) ಕ್ಯಾಂಪಸ್‌ನಲ್ಲಿ ‘ನಾಯಿಗಳು ಮತ್ತು ಮುಸ್ಲಿಮರು ಆವರಣವನ್ನು ಪ್ರವೇಶಿಸಬಾರದು’ ಎಂಬ ಮುಸ್ಲಿಮ್ ವಿರೋಧಿ ಗೀಚು ಬರಹಗಳು ಕಾಣಿಸಿಕೊಂಡಿದ್ದವು.
ಮಂಗಳವಾರ,ನ.11ರಂದು ಹಾಸ್ಟೆಲ್‌ನಲ್ಲಿಯ ವಿದ್ಯಾರ್ಥಿಗಳಿಗೆ ಸಿ.ವಿ.ರಾಮನ್ ಸಭಾಂಗಣದ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಗೀಚು ಬರಹಗಳು ಕಂಡು ಬಂದಿದ್ದವು.
ಹಾಸ್ಟೆಲ್‌ನ ಪ್ರವೇಶ ದ್ವಾರದ ಒಂದು ಬದಿಯಲ್ಲಿ ಕಪ್ಪು ಬಣ್ಣದಲ್ಲಿ ‘ನಾಯಿಗಳು ಆವರಣವನ್ನು ಪ್ರವೇಶಿಸಬಾರದು’ ಎಂದು ಬರೆಯಲಾಗಿದ್ದು,ಇದು ಕೆಲವು ವರ್ಷಗಳಿಂದಲೂ ಇದೆ. ಯಾರೋ ಕಿಡಿಗೇಡಿಗಳು ಇದರ ಮೇಲ್ಗಡೆ ಬಿಳಿಯ ಸೀಮೆಸುಣ್ಣದಿಂದ ‘ಮುಸ್ಲಿಮರು ಮತ್ತು’ ಎಂದು ಬರೆದಿದ್ದು, ಈಗ ಅದು ‘ಮುಸ್ಲಿಮರು ಮತ್ತು ನಾಯಿಗಳು ಆವರಣವನ್ನು ಪ್ರವೇಶಿಸಬಾರದು’ ಎಂದಾಗಿದೆ. ಇನ್ನೊಂದು ಬದಿಯಲ್ಲಿ ಈಗ ‘ಮುಸ್ಲಿಮರಿಗೆ ಅವಕಾಶವಿಲ್ಲ’ ಎಂದು ಬರೆಯಲಾಗಿದೆ.
ಹಾಸ್ಟೆಲ್‌ನ ಎರಡನೇ ಮಹಡಿಯ ಮೂಲೆಯಲ್ಲಿರುವ ಕಸದ ಬುಟ್ಟಿಯ ಮೇಲೆ ‘ಇದು ಮುಸ್ಲಿಮರಿಗೆ ಏಕೈಕ ಸ್ಥಳ’ ಎಂದು ಬರೆಯಲಾಗಿದ್ದರೆ, ಹಾಸ್ಟೆಲ್‌ನ ಮೆಟ್ಟಿಲುಗಳ ರೇಲಿಂಗ್‌ನ್ನು ‘ನಾಯಿಗಳು ಮತ್ತು ಮುಸ್ಲಿಮರು ಬೇಡ’ ಎಂದು ಬರೆದು ವಿರೂಪಗೊಳಿಸಲಾಗಿದೆ.
ನ.10ರಂದು ಸಂಜೆ 6:50ರ ಸುಮಾರಿಗೆ ದಿಲ್ಲಿಯ ಕೆಂಪುಕೋಟೆಯ ಬಳಿ ಕಾರೊಂದರಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಫರೀದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ, ದಕ್ಷಿಣ ಕಾಶ್ಮೀರದ ಪುಲ್ವಾಮಾ ನಿವಾಸಿ ಡಾ.ಉಮರ್ ಉನ್-ನಬಿ ಕಾರನ್ನು ಚಲಾಯಿಸುತ್ತಿದ್ದನ್ನು ಪ್ರಾಥಮಿಕ ವರದಿಗಳು ಸೂಚಿಸಿವೆ.
ಇಂತಹ ಘಟನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತೆ ಸೋಮವಾರ ತಡರಾತ್ರಿಯವರೆಗೂ ವಿವರಗಳು ಅಸ್ಪಷ್ಟವಾಗಿದ್ದು, ಪರಸ್ಪರ ವಿರೋಧಾಭಾಸದ ವರದಿಗಳಿಗೆ ಕಾರಣವಾಗಿತ್ತು.
ಐಎಸ್‌ಐ ಹಾಸ್ಟೆಲ್ ನಿವಾಸಿಗಳ ಪ್ರಕಾರ ಮಂಗಳವಾರ ಬೆಳಿಗ್ಗೆ 6:30 ಮತ್ತು 7:30ರ ನಡುವೆ ಮುಖ್ಯ ದ್ವಾರದ ಮೇಲೆ ಗೀಚು ಬರಹವನ್ನು ಬರೆಯಲಾಗಿದೆ.
ಗೀಚುಬರಹದ ಚಿತ್ರಗಳನ್ನು ವಿವಿಧ ವಿಭಾಗಗಳು ಮತ್ತು ಬ್ಯಾಚ್‌ಗಳ ವಿದ್ಯಾರ್ಥಿಗಳು ಸದಸ್ಯರಾಗಿರುವ ಸಾಮಾನ್ಯ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾಗಿತ್ತು.‘ಇದನ್ನು ಬರೆದವರು ಯಾರೇ ಆಗಿರಲಿ, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಬೇಕು’ ಎಂದು ಪೋಸ್ಟ್‌ನಲ್ಲಿ ಕೋರಲಾಗಿತ್ತು. ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ವಿದ್ಯಾರ್ಥಿಯೋರ್ವರು ತಿಳಿಸಿದರು.
ಈ ದ್ವೇಷ ಬರಹಗಳ ಬಗ್ಗೆ ವಿದ್ಯಾರ್ಥಿ ಸಂಘವು ಆಡಳಿತಕ್ಕೆ ದೂರು ಸಲ್ಲಿಸಿದ್ದು, ಐಎಸ್‌ಐ ಕೋಲ್ಕತಾದ ನಿರ್ದೇಶಕ ಸಂಘಮಿತ್ರ ಬಂಡೋಪಾಧ್ಯಾಯ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೀಚು ಬರಹವನ್ನು ಅಳಿಸಬೇಕೆಂದು ನಿರ್ದೇಶಕರು ಬಯಸಿದ್ದರಾದರೂ ವಿದ್ಯಾರ್ಥಿಗಳು ಅದಕ್ಕೆ ಅವಕಾಶ ನೀಡಿಲ್ಲ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚುವಂತೆ ಅವರು ಆಗ್ರಹಿಸಿದ್ದಾರೆ.