ಕೆಲಸದ ಸ್ಥಳ ಅಸುರಕ್ಷಿತ ಎಂದ ಶೇ.50ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು : ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದಿಲ್ಲಿಯ ವರ್ಧಮಾನ ಮಹಾವೀರ ಮೆಡಿಕಲ್ ಕಾಲೇಜ್, ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ಏಮ್ಸ್ ನ ತಜ್ಞರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಕಾರ್ಯಕರ್ತರ ಪೈಕಿ ಅರ್ಧಕ್ಕೂ ಹೆಚ್ಚಿನವರು, ವಿಶೇಷವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ, ತಮ್ಮ ಕೆಲಸದ ಸ್ಥಳವು ಅಸುರಕ್ಷಿತವಾಗಿದೆ ಎಂದು ಭಾವಿಸಿದ್ದಾರೆ.
ಭಾರತೀಯ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿಯ ಮೂಲಸೌಕರ್ಯಗಳಲ್ಲಿ ಗಮನಾರ್ಹ ಕೊರತೆಗಳನ್ನು ಅಧ್ಯಯನವು ಎತ್ತಿ ತೋರಿಸಿದೆ.
‘ಎಪಿಡೆಮಿಯಾಲಜಿ ಇಂಟರ್‌ನ್ಯಾಷನಲ್’ ಜರ್ನಲ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು, ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಪ್ರಚಲಿತ ಸುರಕ್ಷತಾ ಮತ್ತು ಭದ್ರತಾ ಕ್ರಮಗಳಲ್ಲಿ ಸುಧಾರಣೆಯನ್ನು ತರುವ ತುರ್ತು ಅಗತ್ಯಕ್ಕೆ ಒತ್ತು ನೀಡಿದೆ.
ಅಧ್ಯಯನಕ್ಕಾಗಿ ನಡೆಸಲಾದ ಸಮೀಕ್ಷೆಯಲ್ಲಿ ದೇಶಾದ್ಯಂತದ ವಿವಿಧ ವೈದ್ಯಕೀಯ ಸಂಸ್ಥೆಗಳ 1,566 ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು. ಇದಕ್ಕಾಗಿ ಆನ್‌ಲೈನ್ ಪ್ರಶ್ನಾವಳಿಯನ್ನು ಬಳಸಲಾಗಿದ್ದು, ಇದು ಕೆಲಸದ ಸ್ಥಳಗಳಲ್ಲಿಯ ಸುರಕ್ಷತೆಯ ವಿವಿಧ ಆಯಾಮಗಳ ಮೌಲ್ಯಮಾಪನ ಮಾಡಿದೆ.
ಸಮೀಕ್ಷೆಯಲ್ಲಿ 869(ಶೇ.55.5) ಮಹಿಳೆಯರು ಮತ್ತು 697 (ಶೇ.44.5) ಪುರುಷರು ಭಾಗವಹಿಸಿದ್ದರು. ಸುಮಾರು ನಾಲ್ಕನೇ ಒಂದು ಭಾಗ (ಶೇ.24.7)ಆರೋಗ್ಯ ಕಾರ್ಯಕರ್ತರು ದಿಲ್ಲಿಗೆ ಸೇರಿದ್ದು, ಅವರಲ್ಲಿ ಶೇ.49.6ರಷ್ಟು ನಿವಾಸಿ ವೈದ್ಯರಾಗಿದ್ದರೆ, ಶೇ.15.9ರಷ್ಟು ಇಂಟರ್ನ್‌ಗಳು ಸೇರಿದಂತೆ ಪದವಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು.
ಬೋಧಕ ವೃಂದ, ವೈದ್ಯಾಧಿಕಾರಿಗಳು, ನರ್ಸಿಂಗ್ ಮತ್ತು ಇತರ ಸಹಾಯಕ ಸಿಬ್ಬಂದಿಗಳಿಂದಲೂ ಉತ್ತರಗಳನ್ನು ಪಡೆಯಲಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.71.5ರಷ್ಟು ಜನರು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅರ್ಧಕ್ಕೂ ಹೆಚ್ಚು (ಶೇ.58.2) ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸದ ಸ್ಥಳವು ಸುರಕ್ಷಿತವಲ್ಲ ಎಂದು ಭಾವಿಸಿದ್ದರೆ, ಶೆ.78.4ರಷ್ಟು ಜನರು ತಾವು ಕರ್ತವ್ಯದಲ್ಲಿದ್ದಾಗ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅರ್ಧದಷ್ಟು ಆರೋಗ್ಯ ಕಾರ್ಯಕರ್ತರು ರಾತ್ರಿ ದೀರ್ಘಾವಧಿಗೆ ಕೆಲಸದಲ್ಲಿದ್ದಾಗ ತಮಗಾಗಿಯೇ ಮೀಸಲಾದ ಡ್ಯೂಟಿ ರೂಮ್ ಸೌಲಭ್ಯವನ್ನು ಹೊಂದಿಲ್ಲ ಎಂದು ಅಧ್ಯಯನ ವರದಿಯು ಬೆಟ್ಟು ಮಾಡಿದೆ.
ಭಾರೀ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ದೇಶಾದ್ಯಂತ ಆರೋಗ್ಯ ಸಂಸ್ಥೆಗಳಲ್ಲಿನ ಹಾಲಿ ಸುರಕ್ಷತಾ ಕ್ರಮಗಳ ಬಗ್ಗೆ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಶೇ.90ಕ್ಕೂ ಅಧಿಕ ವೈದ್ಯಕೀಯ ಸಂಸ್ಥೆಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿ ವಸ್ತುಗಳಿಗೆ ಸೂಕ್ತ ತಪಾಸಣೆಯ ಕೊರತೆಯಿದ್ದರೆ, ಶೇ.75ರಷ್ಟು ಆಸ್ಪತ್ರೆಗಳು ಸೂಕ್ತ ಆವರಣ ಗೋಡೆಗಳನ್ನು ಹೊಂದಿಲ್ಲ. ಇದು ಮಹತ್ವದ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಉದ್ಯೋಗಿಗಳು ಮತ್ತು ರೋಗಿಗಳನ್ನು ಅಪಾಯಕ್ಕೊಡ್ಡಿರುವ ಅಸಮರ್ಪಕ ಭದ್ರತೆಯ ದಯನೀಯ ಚಿತ್ರಣವನ್ನು ಒದಗಿಸಿದೆ ಎಂದು ವರದಿಯು ಬೆಟ್ಟು ಮಾಡಿದೆ.