ಶೆಫಾಲಿ ಜರಿವಾಲಾ ಸಾವಿನ ನಡುವೆ ಸ್ಟೆರಾಯ್ಡ್ ಗಳು, ಹಾರ್ಮೋನ್ ಥೆರಪಿಯಿಂದ ಹೃದಯಾಘಾತದ ಅಪಾಯ; ತಜ್ಞ ವೈದ್ಯರ ಎಚ್ಚರಿಕೆ
ಶೆಫಾಲಿ ಜರಿವಾಲಾ | PC : NDTV
ಹೊಸದಿಲ್ಲಿ: ‘ಕಾಂಟಾ ಲಗಾ‘ಖ್ಯಾತಿಯ ಶೆಫಾಲಿ ಜರಿವಾಲಾ ಅವರು ಕಳೆದ ವಾರ ಹೃದಯಾಘಾತದಿಂದ ಸಾವನ್ನಪ್ಪಿರುವುದು ಭಾರತದಲ್ಲಿ ವಯಸ್ಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ತಮ್ಮ ಫಿಟ್ ನೆಸ್ ಅನ್ನು ಕಾಯ್ದುಕೊಳ್ಳುವವರಲ್ಲಿಯೂ ಹೃದಯ ರಕ್ತನಾಳ ಕಾಯಿಲೆಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ಫಿಟ್ ನೆಸ್ ಥೆರಪಿಗಳು ಮತ್ತು ವ್ಯಾಯಮವಷ್ಟೇ ಸಾಕೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಿಲ್ಲಿ ಎನ್‌ಸಿಆರ್‌ನ ಕೌಶಾಂಬಿಯ ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಸ್‌ನ ಇಂಟರ್ ವೆನ್ ಶನಲ್ ಕಾರ್ಡಿಯಾಲಜಿಯ ಪ್ರಧಾನ ಸಮಾಲೋಚಕ ಡಾ.ಧೀರೇಂದ್ರ ಸಿಂಘಾನಿಯಾ ಅವರು, ಸ್ಟೆರಾಯ್ಡ್ ಗಳು, ನಿದ್ರೆಯ ಕೊರತೆ ಮತ್ತು ಹಾರ್ಮೋನ್ ಚಿಕಿತ್ಸೆಗಳು(ವಿಶೇಷವಾಗಿ ಮಹಿಳೆಯರಲ್ಲಿ) ಇವು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದರು.
‘ಪ್ರತಿಯೊಬ್ಬರೂ, ಅವರು ಸೆಲೆಬ್ರಿಟಿಯಾಗರಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಿರಲಿ, ಶರೀರದ ನಿಯಮಗಳನ್ನು ಅನುಸರಿಸದಿದ್ದರೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಸೆಲೆಬ್ರಿಟಿಗಳಲ್ಲಿ ಎಲ್ಲರೂ ತಾವು ಫಿಟ್ ಆಗಿ ಕಾಣಿಸಿಕೊಳ್ಳಲು ಶರೀರ ಸೌಂದರ್ಯವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಅದನ್ನು ಸಾಧಿಸಲು ಅವರು ಏನು ಮಾಡುತ್ತಾರೆ ಎನ್ನುವುದು ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಗೊತ್ತಿರುವುದಿಲ್ಲ. ನಿದ್ರೆಯ ಕೊರತೆಯು ಹೃದಯ ಸಮಸ್ಯೆಗೆ ಪರಿಚಿತ ಕಾರಣವಾಗಿದೆ. ಹಲವಾರು ಸೆಲೆಬ್ರಿಟಿಗಳು ಆಗಾಗ್ಗೆ ಇಡೀ ರಾತ್ರಿ ನಿದ್ರಿಸುವುದೇ ಇಲ್ಲ ’ಎಂದು ಹೇಳಿದ ಡಾ.ಸಿಂಘಾನಿಯಾ, ಸ್ಟೆರಾಯ್ಡ್‌ಗಳು, ಮಿತಿ ಮೀರಿದ ಔಷಧಿ ಸೇವನೆ, ಮಹಿಳೆಯರಿಗೆ ಹಾರ್ಮೋನ್ ಬದಲಾವಣೆಯಂತಹ ಚಿಕಿತ್ಸೆ(ಋತುಬಂಧ ಸಂಬಂಧಿತ)ಯಂತಹ ಹಾರ್ಮೋನಲ್ ಥೆರಪಿಗಳು ಮತ್ತು ಗರ್ಭ ನಿರೋಧಕ ಮಾತ್ರೆಗಳ ಸೇವನೆ ಇವೆಲ್ಲ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ ಎಂದರು.
ಇದಲ್ಲದೆ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಮಾಧ್ಯಮ ಬಳಕೆಯ ಗೀಳು ಕೂಡ ರಕ್ತದೊತ್ತಡ ಮತ್ತು ಕಾರ್ಟಿಸೋಲ್ ಮಟ್ಟ ಹೆಚ್ಚಾಗಲು ತಮ್ಮ ಕೊಡುಗೆ ನೀಡುತ್ತವೆ ಮತ್ತು ಇದು ಅಂತಿಮವಾಗಿ ಹೃದಯ ರಕ್ತನಾಳ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಇತ್ತೀಚಿಗೆ ಹೃದಯಾಘಾತದಿಂದ ಬದುಕುಳಿದ 36ರ ಹರೆಯದ ವ್ಯಕ್ತಿಯ ಕೊರೋನಾ ಆ್ಯಂಜಿಯೋಗ್ರಾಫಿಯನ್ನು ತೋರಿಸಿದ ಡಾ.ಸಿಂಘಾನಿಯಾ, ಆ ವ್ಯಕ್ತಿ ಎಂದೂ ಧೂಮಪಾನ ಅಥವಾ ಮದ್ಯಪಾನ ಮಾಡಿರಲಿಲ್ಲ, ಯಾವುದೇ ಆರೋಗ್ಯ ಸಮಸ್ಯೆಯಿರಲಿಲ್ಲ, ಆದರೂ ಹೃದಯಾಘಾತಕ್ಕೆ ತುತ್ತಾಗಿದ್ದರು ಎಂದು ತಿಳಿಸಿದರು.